ಪಿರಿಯಾಪಟ್ಟಣ, ಫೆಬ್ರವರಿ 2, 2026 : ತಾಲೂಕಿನ ಕೆಳಗನಕೊಪ್ಪಲು ಗ್ರಾಮದಲ್ಲಿ ಜಾನುವಾರುಗಳ ಮೇವಿನ ಹುಲ್ಲಿನ ಮೆದೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ, ಲಕ್ಷಾಂತರ ರೂಪಾಯಿ ಮೌಲ್ಯದ ಮೇವು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ನಡೆದಿದೆ.
ಗ್ರಾಮದ ರೈತ ಕೆಂಚೇಗೌಡ ಎಂಬುವವರಿಗೆ ಸೇರಿದ ಸುಮಾರು 8 ಎಕರೆ ಭೂಮಿಯಲ್ಲಿ ಬೆಳೆದಿದ್ದ ಭತ್ತ ಹಾಗೂ ರಾಗಿ ಹುಲ್ಲನ್ನು ಮೆದೆ ಹಾಕಲಾಗಿತ್ತು. ದುರದೃಷ್ಟವಶಾತ್ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಿಗೆಗೆ ಇಡೀ ಮೆದೆ ಆಹುತಿಯಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರಾದರೂ, ಅಷ್ಟರಲ್ಲಾಗಲೇ ಮೇವು ಸಂಪೂರ್ಣವಾಗಿ ಭಸ್ಮವಾಗಿತ್ತು. ಜಾನುವಾರುಗಳಿಗೆ ಶೇಖರಿಸಿಟ್ಟಿದ್ದ ಮೇವು ಕಣ್ಣೆದುರೇ ಸುಟ್ಟು ಹೋಗಿರುವುದು ರೈತ ಕುಟುಂಬಕ್ಕೆ ಆಘಾತ ತಂದಿದೆ.
