ಮೈಸೂರು, ನವೆಂಬರ್ 3, 2025 : ಯಾರು ಏನೇ ಹೇಳಿದರೂ ಅದು ಮುಖ್ಯವಲ್ಲ. ಕಾಂಗ್ರೆಸ್ ಹೈಕಮಾಂಡ್ ಹೇಳುವುದಷ್ಟೇ ಮುಖ್ಯ. ಕಾಂಗ್ರೆಸ್ ಹೈಕಮಾಂಡ್ ಏನಾದರೂ ಈ ಬಗ್ಗೆ ಹೇಳಿದೆಯಾ? ಯಾಕೆ ಪದೇ ಪದೇ ಅದನ್ನೇ ಮಾತನಾಡುತ್ತೀರಾ? ಎಂದು ಸಿಎಂ ಸಿದ್ದರಾಮಯ್ಯ ಇಂದು ಮಾಧ್ಯಮಗಳ ಮೇಲೆ ಗರಂ ಆದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮೈಸೂರಿನ ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸಿದರು. ಈ ವೇಳೆ ಬಿಹಾರ ಮೂಲದ ಮುಖಂಡರೊಬ್ಬರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿ ಎಂದು ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮದವರ ಮೇಲೆ ಗರಂ ಆಗಿದ್ದಾರೆ.
ಜನ ಮಾತನಾಡುತ್ತಿಲ್ಲ, ಮಾಧ್ಯಮದವರೇ ಪದೇ ಪದೇ ಇದನ್ನು ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌ಗೆ ಹೈಕಮಾಂಡ್ ಇದೆ. ಹೈಕಮಾಂಡ್ ಹೇಳುವುದು ಮಾತ್ರವೇ ಮುಖ್ಯ, ಅದೇ ಅಂತಿಮ. ಯಾರು ಏನೇ ಹೇಳಿದರೂ ಅದು ಮುಖ್ಯವಲ್ಲ. ಕಾಂಗ್ರೆಸ್ ಹೈಕಮಾಂಡ್ ಹೇಳುವುದಷ್ಟೇ ಮುಖ್ಯ ಎಂದು ಕಿಡಿಕಾರಿದರು. ಇದೆವೇಳೆ ಸಂಪುಟ ಪುನರ್‌ರಚನೆ ಮತ್ತು ವಿಸ್ತರಣೆ ಕುರಿತು ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದು, ನಾನು ಬಿಹಾರ ಚುನಾವಣೆ ಮುಗಿದ ಬಳಿಕ ರಾಹುಲ್ ಗಾಂಧಿಯವರನ್ನು ಭೇಟಿ ಮಾಡುತ್ತೇನೆ. ಸಂಪುಟ ಪುನರ್‌ರಚನೆ ಬಗ್ಗೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ಚರ್ಚೆ ಮಾಡುತ್ತೇನೆ. ಇದಕ್ಕಾಗಿಯೇ ನವೆಂಬರ್ 15 ಕ್ಕೆ ದೆಹಲಿಗೆ ಹೋಗುತ್ತಿದ್ದೇನೆ. ಸಂಪುಟ ಪುನರ್‌ರಚನೆ ಬಗ್ಗೆ ಹೈಕಮಾಂಡ್ ಏನು ಹೇಳುತ್ತದೆಯೋ ಆ ರೀತಿ ನಡೆದುಕೊಳ್ಳುತ್ತೇನೆ ಎಂದು ನುಡಿದರು.
ಹುಲಿ ದಾಳಿ ಪ್ರಕರಣಕ್ಕೆ ಪ್ರತ್ಯೇಕ ಸಭೆ
ಮೈಸೂರು ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಹುಲಿ ದಾಳಿ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಈ ಕುರಿತು ಪ್ರತ್ಯೇಕ ಸಭೆ ನಡೆಸುವುದಾಗಿ ತಿಳಿಸಿದರು.ಜನರು ಕಾಡಿನೊಳಗೆ ಓಡಾಡಲು ಶುರು ಮಾಡಿದ್ದಾರೆ. ಹೀಗಾಗಿ ಪ್ರಾಣಿಗಳು ಹೊರಬರಲು ಪ್ರಾರಂಭಿಸಿವೆ. ಕಾಡಿನೊಳಗೆ ಪ್ರಾಣಿಗಳಿಗೆ ಮೇವು-ನೀರು ಸಿಗುತ್ತಿಲ್ಲ. ಇದರಿಂದಲೂ ನಾಡಿಗೆ ಪ್ರಾಣಿಗಳು ಬರುತ್ತಿವೆ. ಕಾಡಂಚಿನಲ್ಲಿ ಅಕ್ರಮ ರೆಸಾರ್ಟ್‌ಗಳು ಹೆಚ್ಚಾಗುತ್ತಿವೆ. ಅವುಗಳಿಗೆ ಕಡಿವಾಣ ಹಾಕುವ ಕೆಲಸ ಮಾಡುತ್ತೇವೆ. ಸಫಾರಿಗಳ ಸಂಖ್ಯೆಯೂ ಹೆಚ್ಚಾಗಿರುವ ಬಗ್ಗೆ ಗಮನಕ್ಕೆ ಬಂದಿದೆ. ಅದನ್ನೂ ಕಡಿಮೆ ಮಾಡುವ ಕೆಲಸ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಅವರು ಈ ಸಮಸ್ಯೆಗಳ ಕುರಿತು ಚರ್ಚಿಸಲು ಪ್ರತ್ಯೇಕ ಸಭೆ ಕರೆಯುವುದಾಗಿ ತಿಳಿಸಿದರು.
ಬಿಹಾರ ಚುನಾವಣೆ: ನಿತೀಶ್ ಕುಮಾರ್‌ಗೆ ಸಿದ್ಧಾಂತವಿಲ್ಲ
ಬಿಹಾರ ಚುನಾವಣೆಯ ಕುರಿತು ಮಾತನಾಡಿದ ಸಿಎಂ, ಅಲ್ಲಿ ‘ಇಂಡಿ’ ಒಕ್ಕೂಟ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಬಿಹಾರದಲ್ಲಿ ಈ ಬಾರಿ ಇಂಡಿ ಒಕ್ಕೂಟ ಅಧಿಕಾರಕ್ಕೆ ಬರುತ್ತದೆ. ನಿತೀಶ್ ಕುಮಾರ್ ಬಗ್ಗೆ ಜನರಿಗೆ ಬೇಸರ ಬಂದಿದೆ. ಅವರಿಗೆ ಯಾವುದೇ ಸಿದ್ಧಾಂತ ಇಲ್ಲ, ಅವರು ಎಲ್ಲಾ ಪಕ್ಷಗಳನ್ನು ಬದಲಾಯಿಸಿದ್ದಾರೆ.ನಮ್ಮ ಗ್ಯಾರಂಟಿಗಳನ್ನೇ ನಿತೀಶ್ ಕುಮಾರ್ ಅಲ್ಲಿ ಘೋಷಣೆ ಮಾಡಿದ್ದಾರೆ. ಆದರೂ ಅಲ್ಲಿಯ ಜನ ಅವರನ್ನು ಕೈ ಹಿಡಿಯುವುದಿಲ್ಲ.ಕರ್ನಾಟಕದಲ್ಲಿ ಬಿಹಾರದ ಮತದಾರರು ಇದ್ದಾರೆ. ಅವರಿಗೂ ನಮ್ಮ ಒಕ್ಕೂಟಕ್ಕೆ ಮತ ಹಾಕಿ ಎಂದು ಕೇಳುತ್ತೇವೆ. ಬಿಹಾರದಲ್ಲಿ ಅತಿ ಹೆಚ್ಚಿನ ಬಡವರು ಇದ್ದಾರೆ ಎಂದರು.
ಸಚಿವರಾದ ವೆಂಕಟೇಶ್, ಮಹದೇವಪ್ಪ ಹಾಗೂ ಶಾಸಕರಾದ ಪುಟ್ಟರಂಗಶೆಟ್ಟಿ, ರವಿಶಂಕರ್ ಮತ್ತು ನರೇಂದ್ರಸ್ವಾಮಿ ಸೇರಿದಂತೆ ಹಲವು ಗಣ್ಯರು ಮುಖ್ಯಮಂತ್ರಿಗೆ ಸಾಥ್ ನೀಡಿದರು.
