ಮೈಸೂರು, ಜನವರಿ 16, 2026: ಮೈಸೂರಿನ ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ಭೂಮಿಗಿರಿ ನಾರಾಯಣಪ್ಪ ಪ್ರತಿಷ್ಠಾನ ಹಾಗೂ ಗಾನ ನಂದನ ವತಿಯಿಂದ 11ನೇ ವರ್ಷದ ರಾಜ್ಯಮಟ್ಟದ ‘ಭೂಮಿಗಿರಿ ನಾರಾಯಣಪ್ಪ ಪ್ರಶಸ್ತಿ’ ಪ್ರದಾನ ಸಮಾರಂಭವು ಗುರುವಾರ ಅತ್ಯಂತ ವೈಭವದಿಂದ ಜರುಗಿತು.
ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಕೆ. ರಘುರಾಂ ವಾಜಪೇಯಿ, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರತಿನಿಧಿ ಪತ್ರಿಕೆಯ ಸಂಪಾದಕ ಧರ್ಮಾಪುರ ನಾರಾಯಣ್, ಶ್ರೀ ರಾಜರಾಜೇಶ್ವರಿ ವಸ್ತ್ರಾಲಂಕಾರದ ಸಂಸ್ಥಾಪಕ ಬಿ.ಎಂ. ರಾಮಚಂದ್ರು ಮತ್ತು ನ್ಯೂಸ್ ಫಸ್ಟ್ ವರದಿಗಾರ ರವಿ ಪಾಂಡವಪುರ ಅವರಿಗೆ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಮೈಸೂರು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಲಿಂಗರಾಜು ಹಾಗೂ ಯುವ ಪರ್ವತಾರೋಹಿ ಸೂರ್ಯಕೃಷ್ಣ ಅವರನ್ನು ವಿಶೇಷವಾಗಿ ಅಭಿನಂದಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ ಅವರು ‘ಸಂಕ್ರಾಂತಿ ಸಂಭ್ರಮ – ಸಂಗೀತ ಸಂಜೆ’ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ್ ವಿ. ಭೈರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅವರು ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಮುಖ್ಯ ಅತಿಥಿಗಳಾಗಿ ಅಲಯನ್ಸ್ ಜಿಲ್ಲಾ ರಾಜ್ಯಪಾಲ ಎಸ್. ವೆಂಕಟೇಶ್, ಜನಹಿತ ವಿವಿದೊದ್ದೇಶ ಸಹಕಾರ ಸಂಘದ ಅಧ್ಯಕ್ಷ ಪಡುವಾರಹಳ್ಳಿ ಭೈರಪ್ಪ ಹಾಗೂ ಪಡುವಾರಹಳ್ಳಿ ಗ್ರಾಮೋಭ್ಯುದಯ ಸಂಘದ ಅಧ್ಯಕ್ಷ ಮೆಲ್ಲಹಳ್ಳಿ ಮಹದೇವಸ್ವಾಮಿ ಪಾಲ್ಗೊಂಡಿದ್ದರು.
ಭೂಮಿಗಿರಿ ನಾರಾಯಣಪ್ಪ ಪ್ರತಿಷ್ಠಾನದ ಅಧ್ಯಕ್ಷ ಎನ್. ಬೆಟ್ಟೇಗೌಡ ಸ್ವಾಗತಿಸಿದರೆ, ಡಾ. ವೈ.ಡಿ. ರಾಜಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಎನ್. ಬೆಟ್ಟೇಗೌಡರ ಸಾರಥ್ಯದಲ್ಲಿ ಡಾ. ವೈ.ಡಿ. ರಾಜಣ್ಣ, ಪೂರ್ಣಿಮಾ, ಶ್ರೀಲತಾ ಮನೋಹರ್, ಸಿ.ಎಸ್. ವಾಣಿ, ಶ್ವೇತಾ, ನಾಗೇಂದ್ರ, ಚಿನ್ನನಾಗಪ್ಪ ಹಾಗೂ ಶ್ರೇಯಾ ಅವರು ನಡೆಸಿಕೊಟ್ಟ ಗಾಯನ ಕಾರ್ಯಕ್ರಮ ಸಭಿಕರ ಮನಸೂರೆಗೊಂಡಿತು. ರೇವತಿ ಕೃಷ್ಣಪ್ಪ ಅವರು ಕಾರ್ಯಕ್ರಮ ನಿರ್ವಹಿಸಿದರು. ಹಬ್ಬದ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಸಭಿಕರಿಗೆ ಸಂಘಟಕರು ಎಳ್ಳು-ಬೆಲ್ಲ ವಿತರಿಸುವ ಮೂಲಕ ಸಂಕ್ರಾಂತಿಯ ಸಂಭ್ರಮವನ್ನು ಇಮ್ಮಡಿಗೊಳಿಸಿದರು.
