ಹುಣಸೂರು, ನವೆಂಬರ್ 8, 2025 : ಪಟ್ಟಣದ ಶಬ್ಬೀರ್ ನಗರದಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ವ್ಯಕ್ತಿಯೊಬ್ಬರನ್ನು ಮಚ್ಚುಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ.
ಮೃತರನ್ನು ಕೆ.ಆರ್. ನಗರ ತಾಲೂಕಿನ ಹೊನ್ನೇನಹಳ್ಳಿ ನಿವಾಸಿ ಕಿದರ್ ಪಾಷ (55) ಎಂದು ಗುರುತಿಸಲಾಗಿದೆ. ಘಟನೆಯು ಶಬ್ಬೀರ್ ನಗರದಲ್ಲಿ ನಡೆದಿದ್ದು, ಕಿದರ್ ಪಾಷ ಅವರು ಕಾರಿನಲ್ಲಿ ಕುಳಿತಿದ್ದಾಗ ಆರೋಪಿಗಳು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಆರೋಪಿಗಳು, “ಸ್ವಲ್ಪ ಮಾತನಾಡಬೇಕು ಹೊರಗೆ ಬಾ” ಎಂದು ಕರೆದು, ಕಿದರ್ ಪಾಷ ಅವರನ್ನು ಹೊರಗೆ ಕರೆದಿದ್ದಾರೆ.
ಮಾತಿನ ಚಕಮಕಿ ನಡೆದು, ಬಳಿಕ ಎಜಾಜ್ ಮತ್ತು ಆತನ ಸಂಗಡಿಗರು ಏಕಾಏಕಿ ಕಿದರ್ ಪಾಷ ಅವರ ಮೇಲೆ ಮಾರಣಾಂತಿಕವಾಗಿ ಮಚ್ಚುಗಳಿಂದ ಹಲ್ಲೆ ನಡೆಸಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಓಡಿದರೂ ಸಹ ಬಿಡದೇ ಬೆನ್ನಟ್ಟಿದ ಆರೋಪಿಗಳು, ಪಾಷಾ ಅವರನ್ನು ಅಟ್ಟಾಡಿಸಿಕೊಂಡು ಕೊಂದು ಹಾಕಿದ್ದಾರೆ. ಹತ್ಯೆ ನಡೆಯುವಾಗ ಮೃತ ಕಿದರ್ ಪಾಷ ಅವರೊಂದಿಗೆ ಅವರ ಸಂಬಂಧಿ ಉಮ್ಮರುದ್ದೀನ್ ಖಾನ್ ಸಹ ಇದ್ದರು. ಈ ಹಲ್ಲೆಯನ್ನು ಬಿಡಿಸಲು ಉಮ್ಮರುದ್ದೀನ್ ಖಾನ್ ಅವರು ಮಧ್ಯಪ್ರವೇಶಿಸಿದಾಗ, ದುಷ್ಕರ್ಮಿಗಳು ಅವರ ಮೇಲೂ ಹಲ್ಲೆ ನಡೆಸಿ ಗಾಯಗೊಳಿಸಿರುವುದಾಗಿ ತಿಳಿದುಬಂದಿದೆ.
ಬರ್ಬರ ಹತ್ಯೆ ನಡೆಸಿದ ಬಳಿಕ ಆರೋಪಿಗಳಾದ ಎಜಾಜ್ ಹಾಗೂ ಅವರ ಸಂಗಡಿಗರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಕುರಿತು ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗಡುಕರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
