ಮೈಸೂರು, ಜನವರಿ 16,2026: ಸುತ್ತೂರು ಜಾತ್ರಾ ಮಹೋತ್ಸವದ ಎರಡನೇ ದಿನವಾದ ಇಂದು ಅತ್ಯಂತ ಅರ್ಥಪೂರ್ಣವಾಗಿ ಸಾಮೂಹಿಕ ವಿವಾಹ ಮಹೋತ್ಸವ ನೆರವೇರಿದೆ. ಸುತ್ತೂರು ಮಠಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮತ್ತು ಸರ್ವ ಧರ್ಮದ ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ಒಟ್ಟು 135 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಈ ಸಮಾರಂಭಕ್ಕೆ ಸಚಿವ ರಾಮಲಿಂಗರೆಡ್ಡಿ, ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ ಮತ್ತು ಅಲ್ಲಂ ವೀರಭದ್ರಪ್ಪ ಸೇರಿದಂತೆ ಅನೇಕ ಗಣ್ಯರು ಸಾಕ್ಷಿಯಾದರು.
ಈ ವಿವಾಹ ಮಹೋತ್ಸವವು ಸಾಮಾಜಿಕ ಸಾಮರಸ್ಯಕ್ಕೆ ಸಾಕ್ಷಿಯಾಯಿತು, ಏಕೆಂದರೆ ಇದರಲ್ಲಿ ಪರಿಶಿಷ್ಟ ಜಾತಿಯ 84 ಜೋಡಿಗಳು, ಹಿಂದುಳಿದ ವರ್ಗದ 21 ಜೋಡಿಗಳು, ಪರಿಶಿಷ್ಟ ಪಂಗಡದ 15 ಜೋಡಿಗಳು, ಅಂತರಜಾತಿಯ 11 ಜೋಡಿಗಳು ಹಾಗೂ ವೀರಶೈವ ಲಿಂಗಾಯತ ಸಮುದಾಯದ 4 ಜೋಡಿಗಳು ವಿವಾಹವಾದರು. ಇದರೊಂದಿಗೆ 3 ವಿಶೇಷಚೇತನ ಜೋಡಿಗಳು ಮತ್ತು 3 ಮರುಮದುವೆಯಾದ ಜೋಡಿಗಳು ಸಹ ಹೊಸ ಜೀವನ ಆರಂಭಿಸಿದರು. ಸರ್ವ ಧರ್ಮಗಳ ಗುರುಗಳ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮವು ಸರಳ ಹಾಗೂ ಸಮಾನತೆಯ ವಿವಾಹ ಪದ್ಧತಿಗೆ ಮಾದರಿಯಾಗಿ ಮೂಡಿಬಂದಿದೆ.

ಪ್ರತೀವರ್ಷದಂತೆ ಈ ಬಾರಿಯೂ ಸಾಮೂಹಿಕ ವಿವಾಹ ನೆರವೇರಿಸಲಾಗಿದ್ದು, ವಧು-ವರರಿಗೆ ಸೀರೆ, ರವಿಕೆ, ತಾಳಿ, ಕಾಲುಂಗುರ, ಪಂಚೆ, ಶಲ್ಯ, ಶರ್ಟ್, ಪೇಟವನ್ನ ಶ್ರೀಕ್ಷೇತ್ರದ ವತಿಯಿಂದ ನೀಡಲಾಗಿದೆ. ಇನ್ನೂ 2009ರಿಂದ ಈವರೆಗೂ 3886 ಜೋಡಿಗಳು ಸತಿಪತಿಗಳಾಗಿದ್ದಾರೆ.
ಜಾತಿ-ಮತದ ಭೇದವಿಲ್ಲದೆ, ಸರ್ವ ಧರ್ಮದ ಗುರುಗಳ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮವು “ಸಮಾನತೆ” ಮತ್ತು “ಸರಳ ವಿವಾಹ”ಕ್ಕೆ ಮಾದರಿಯಾಗಿದೆ.
