ಮೈಸೂರು, ಡಿಸೆಂಬರ್ 23, 2025 : ಸಾಂಸ್ಕೃತಿಕ ನಗರಿ ಮೈಸೂರಿನ ಹೊರವಲಯದ ಗ್ರಾಮಗಳಲ್ಲಿ ಚಿರತೆ ಹಾವಳಿ ಮುಂದುವರಿದಿದ್ದು, ಈಗ ಬೆಳವಾಡಿ ಗ್ರಾಮದಲ್ಲಿ ಚಿರತೆಯೊಂದು ಬೀದಿ ನಾಯಿಯನ್ನು ಶಿಕಾರಿ ಮಾಡಿರುವ ಘಟನೆ ನಡೆದಿದೆ.

ಮೈಸೂರಿನ ಹೊರವಲಯದಲ್ಲಿರುವ ಬೆಳವಾಡಿ ಗ್ರಾಮದ ಕೆರೆ ಪಾಪಣ್ಣ ಎಂಬುವವರ ಮನೆಯ ಸಮೀಪ ಈ ಘಟನೆ ಸಂಭವಿಸಿದೆ. ಎಂದಿನಂತೆ ನಾಯಿಗಳ ಗುಂಪು ರಸ್ತೆಯಲ್ಲಿ ಓಡಾಡುತ್ತಿದ್ದ ಸಂದರ್ಭದಲ್ಲಿ, ಏಕಾಏಕಿ ದಾಳಿ ಮಾಡಿದ ಚಿರತೆಯು ಗುಂಪಿನಲ್ಲಿದ್ದ ಒಂದು ನಾಯಿಯನ್ನು ಹಿಡಿದು ಹೊತ್ತೊಯ್ದಿದೆ.
ಚಿರತೆ ಅಟ್ಯಾಕ್ ಮಾಡುತ್ತಿದ್ದಂತೆ ಸ್ಥಳದಲ್ಲಿದ್ದ ನಾಲ್ಕೈದು ನಾಯಿಗಳು ಜೋರಾಗಿ ಕೂಗಾಡಿ ಪ್ರತಿರೋಧ ಒಡ್ಡಲು ಯತ್ನಿಸಿವೆ. ಆದರೆ, ಯಾವುದಕ್ಕೂ ಜಗ್ಗದ ಚಿರತೆಯು ತನ್ನ ಬಾಯಿಗೆ ಸಿಕ್ಕ ನಾಯಿಯನ್ನು ಬಿಡದೆ ಕತ್ತಲೆಯಲ್ಲಿ ಮಾಯವಾಗಿದೆ.
ಜನವಸತಿ ಇರುವ ಪ್ರದೇಶಕ್ಕೇ ನುಗ್ಗಿ ಚಿರತೆ ದಾಳಿ ಮಾಡಿರುವುದು ಗ್ರಾಮಸ್ಥರಲ್ಲಿ ತೀವ್ರ ಭೀತಿ ಮೂಡಿಸಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಚಿರತೆಯನ್ನು ಸೆರೆಹಿಡಿಯಲು ಬೋನು ಅಳವಡಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
