ಮೈಸೂರು, ಡಿಸೆಂಬರ್ 10, 2025 : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಡೆವಿಲ್’ ನಾಳೆ (ಡಿಸೆಂಬರ್ 11) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ದರ್ಶನ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಚಿತ್ರ ಬಿಡುಗಡೆಗೂ ಮುನ್ನವೇ ನಗರದಲ್ಲಿ ‘ಡೆವಿಲ್ ಸ್ಟಾರ್ಸ್’ ಮೆರವಣಿಗೆಯನ್ನು ಆಯೋಜಿಸುವ ಮೂಲಕ ಅಭಿಮಾನಿಗಳು ಅಬ್ಬರಿಸಿದ್ದಾರೆ.
ಭವ್ಯ ಮೆರವಣಿಗೆಯಲ್ಲಿ ಕಲಾತಂಡಗಳ ಜತೆ ‘ಡಿ ಬಾಸ್’ ಕಾರುಗಳು
ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯಿಂದ ಆರಂಭವಾದ ಈ ಸ್ಟಾರ್ಸ್ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಮೆರವಣಿಗೆಯಲ್ಲಿ ಹಳ್ಳಿಕಾರ್ ತಳಿಯ ಹಸು, ಡೊಳ್ಳು ಕುಣಿತ, ಪೂಜಾ ಕುಣಿತ, ತಮಟೆ, ಕೀಲು ಗೊಂಬೆಗಳಂತಹ ಜನಪದ ಕಲಾತಂಡಗಳು ಭಾಗವಹಿಸಿದ್ದವು.
ವಿಶೇಷವಾಗಿ, ನಟ ದರ್ಶನ್ ಅವರು ಬಳಸುತ್ತಿದ್ದ ಕಾರುಗಳು ಸಹ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಈ ವೇಳೆ ಅಭಿಮಾನಿಗಳು, ಡಿ ಬಾಸ್ ಭಾವಚಿತ್ರಕ್ಕೆ ಕುಂಬಳಕಾಯಿ ದೃಷ್ಟಿ ತೆಗೆದು ಶುಭ ಕೋರಿದರು.
ಸಂಗಮ್ ಥಿಯೇಟರ್‌ನಲ್ಲಿ ಕಟೌಟ್‌ಗಳದ್ದೇ ಕಾರುಬಾರು
ಮೈಸೂರಿನ ಪ್ರಮುಖ ಚಿತ್ರಮಂದಿರವಾದ ಸಂಗಮ್ ಥಿಯೇಟರ್ ಅನ್ನು ಡಿ ಬಾಸ್ ಅಭಿಮಾನಿಗಳು ಹಬ್ಬದ ವಾತಾವರಣ ಸೃಷ್ಟಿಸಿದ್ದಾರೆ.ಚಿತ್ರಮಂದಿರದ ತುಂಬೆಲ್ಲಾ ದರ್ಶನ್ ಅವರ ಬೃಹತ್ ಕಟೌಟ್‌ಗಳನ್ನು ಅಳವಡಿಸಲಾಗಿದ್ದು, ಕೆಲವೊಂದು ಕಟೌಟ್‌ಗಳಿಂದ ಚಿತ್ರಮಂದಿರವೇ ಮುಚ್ಚಿದಂತೆ ಕಾಣುತ್ತಿತ್ತು.
ಅಭಿಮಾನಿಗಳಿಗಾಗಿ ನಾಳೆ ಬೆಳಿಗ್ಗೆ 6:15ಕ್ಕೆ ಸಂಗಮ್ ಚಿತ್ರಮಂದಿರದಲ್ಲಿ ‘ಫ್ಯಾನ್ಸ್ ಶೋ’ ಆಯೋಜಿಸಲಾಗಿದೆ. ಅಭಿಮಾನಿಗಳ ಕ್ರೇಜ್‌ಗೆ ಸಾಕ್ಷಿ ಎಂಬಂತೆ, ಸಂಗಮ್ ಥಿಯೇಟರ್‌ನಲ್ಲಿ ನಾಳೆಯ ಎಲ್ಲಾ 5 ಶೋಗಳ ಟಿಕೆಟ್‌ಗಳು ಸಂಪೂರ್ಣವಾಗಿ ಸೋಲ್ಡ್ ಔಟ್ ಆಗಿವೆ. ನಾಳಿದ್ದಿನ ಟಿಕೆಟ್ ಬುಕ್ಕಿಂಗ್ ಸಹ ಭರದಿಂದ ಸಾಗುತ್ತಿದೆ ಎಂದು ತಿಳಿದುಬಂದಿದೆ.
‘ಶಾಂತ ರೀತಿಯಲ್ಲಿ ಚಿತ್ರ ವೀಕ್ಷಿಸಿ’: ಥಿಯೇಟರ್ ಮಾಲೀಕರ ಮನವಿ
ಈ ಬಗ್ಗೆ ಮಾತನಾಡಿದ ಸಂಗಮ್ ಥಿಯೇಟರ್ ಮಾಲೀಕ ಆರ್. ಕುಮಾರ್ ಅವರು, ದರ್ಶನ್ ಮೇಲಿನ ಅಭಿಮಾನಿಗಳ ಪ್ರೀತಿ ಅಪಾರ. ದರ್ಶನ್ ಅವರ ಚಿತ್ರಗಳಿಂದ ಯಾವುದೇ ಥಿಯೇಟರ್ ಮಾಲೀಕರಿಗೆ ಇಲ್ಲಿಯವರೆಗೆ ನಷ್ಟವಾಗಿಲ್ಲ ಎಂದರು.
ಅಭಿಮಾನಿಗಳಿಗೆ ಅವರು ವಿಶೇಷ ಮನವಿ ಮಾಡಿದ್ದು, “ಅಭಿಮಾನಿಗಳು ಶಾಂತ ರೀತಿಯಲ್ಲಿ ಚಿತ್ರವನ್ನು ವೀಕ್ಷಿಸಿ. ಯಾವುದೇ ಕಾರಣಕ್ಕೂ ಗಲಾಟೆ ಮಾಡಿಕೊಳ್ಳಬೇಡಿ. ನೀವು ಇಲ್ಲಿ ಏನೇ ಮಾಡಿದರೂ ಅದು ದರ್ಶನ್ ಸರ್ ಅವರಿಗೆ ಕಷ್ಟವಾಗುತ್ತದೆ,” ಎಂದು ಅಭಿಮಾನಿಗಳಲ್ಲಿ ವಿನಂತಿಸಿಕೊಂಡರು.
