ನಂಜನಗೂಡು, ಮಾರ್ಚ್ 30, 2026 : ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದ ಶ್ರೀಕಂಠೇಶ್ವರ ಸ್ವಾಮಿಯ ಅದ್ದೂರಿ ರಥೋತ್ಸವದ ಸಂಭ್ರಮದ ನಡುವೆಯೇ ಭಕ್ತರೊಬ್ಬರು ಸಾವನ್ನಪ್ಪಿರುವ ವಿಷಾದನೀಯ ಘಟನೆ ನಡೆದಿದೆ. ಮೃತರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ಮೂಲದ ನಂಜುಂಡಸ್ವಾಮಿ (65) ಎಂದು ಗುರುತಿಸಲಾಗಿದೆ.

ದೊಡ್ಡ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ಪ್ರತಿ ವರ್ಷದಂತೆ ಈ ಬಾರಿಯೂ ನಂಜುಂಡಸ್ವಾಮಿ ಅವರು ಮಾಗಡಿಯಿಂದ ಆಗಮಿಸಿದ್ದರು. ದೇವಸ್ಥಾನದ ಮುಂಭಾಗದಲ್ಲಿ ರಥೋತ್ಸವದ ಸಂಭ್ರಮ ವೀಕ್ಷಿಸುತ್ತಿದ್ದ ವೇಳೆ ಅವರು ಅಕಸ್ಮಾತ್ ಆಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯ ಪೊಲೀಸರು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ್ದರೂ ಸಹ, ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಮೃತ ನಂಜುಂಡಸ್ವಾಮಿ ಅವರು ಕಳೆದ ಕೆಲವು ಸಮಯದಿಂದ ಡಯಾಲಿಸಿಸ್ ನಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ತೀವ್ರ ಅನಾರೋಗ್ಯದ ನಡುವೆಯೂ ಶ್ರೀ ನಂಜುಂಡೇಶ್ವರ ಸ್ವಾಮಿಯ ಮೇಲಿನ ಅತೀವ ಭಕ್ತಿಯಿಂದ ಪ್ರತಿವರ್ಷ ಜಾತ್ರೆಗೆ ತಪ್ಪದೇ ಆಗಮಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಶ್ರೀಕಂಠೇಶ್ವರನ ದರ್ಶನ ಪಡೆಯುವ ಹಂಬಲದಿಂದ ಬಂದಿದ್ದ ಭಕ್ತನೊಬ್ಬ ದೇವಸ್ಥಾನದ ಮುಂದೆಯೇ ಇಹಲೋಕ ತ್ಯಜಿಸಿರುವುದು ನೆರೆದಿದ್ದ ಭಕ್ತರಲ್ಲಿ ವಿಷಾದ ಮೂಡಿಸಿದೆ.
