ಮೈಸೂರು, ಮಾರ್ಚ್ 25, 2026 : ರಸ್ತೆ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ ಸಂಚರಿಸುತ್ತಿದ್ದ ವಾಹನಗಳ ವಿರುದ್ಧ ಮೈಸೂರು ಆರ್‌ಟಿಒ ಅಧಿಕಾರಿಗಳು ಸಮರ ಸಾರಿದ್ದಾರೆ. ನಗರದಾದ್ಯಂತ ಕಟ್ಟುನಿಟ್ಟಿನ ತಪಾಸಣೆ ನಡೆಸಿದ ಅಧಿಕಾರಿಗಳ ತಂಡ, ಕಾನೂನು ಉಲ್ಲಂಘಿಸಿ ಸಂಚರಿಸುತ್ತಿದ್ದ ಹಲವಾರು ವಾಹನಗಳನ್ನು ವಶಪಡಿಸಿಕೊಳ್ಳುವ ಮೂಲಕ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಮುಖ್ಯವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದ 4 ಶಾಲಾ ಬಸ್‌ಗಳನ್ನು ಜಪ್ತಿ ಮಾಡಲಾಗಿದೆ. ಶಾಲಾ ವಾಹನಗಳಲ್ಲಿ ಎಫ್‌ಸಿ (Fitness Certificate) ಇಲ್ಲದಿರುವುದು, ಬಾಗಿಲುಗಳು ಸರಿಯಾಗಿಲ್ಲದಿದ್ದರೂ ಮತ್ತು ಮುಂಭಾಗದ ಗ್ಲಾಸ್‌ಗಳು ಒಡೆದಿದ್ದರೂ ಮಕ್ಕಳನ್ನು ಕರೆದೊಯ್ಯುತ್ತಿರುವುದು ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅಧಿಕಾರಿಗಳು, ಶಾಲಾ ವಾಹನಗಳ ಸ್ಥಿತಿಗತಿ ಬಗ್ಗೆ ಪೋಷಕರು ಶಾಲಾ ಮುಖ್ಯಸ್ಥರ ಗಮನಕ್ಕೆ ತರಬೇಕು ಮತ್ತು ಮಕ್ಕಳ ಸುರಕ್ಷತೆಯಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದು ಎಚ್ಚರಿಸಿದ್ದಾರೆ.
ಕೇವಲ ಶಾಲಾ ಬಸ್‌ಗಳಲ್ಲದೆ, ಜೀಪ್‌ಗಳಿಗೆ ಅತಿ ದೊಡ್ಡ ಗಾತ್ರದ ಟೈಯರ್‌ಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಹಾಗೂ ಇತರೆ ವಾಹನ ಸವಾರರಿಗೆ ತೊಂದರೆ ನೀಡುತ್ತಿದ್ದ ಜೀಪ್‌ಗಳನ್ನು ಸಹ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲದೆ, ಸರಿಯಾದ ದಾಖಲೆಗಳಿಲ್ಲದ, ವಿಮೆ ಮತ್ತು ಚಾಲನಾ ಪರವಾನಗಿ ಇಲ್ಲದ ಹಾಗೂ ತೆರಿಗೆ ಪಾವತಿಸದೆ ಕರ್ನಾಟಕದಲ್ಲಿ ಸಂಚರಿಸುತ್ತಿದ್ದ ಅನ್ಯ ರಾಜ್ಯದ ವಾಹನಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಆರ್‌ಟಿಒ ಅಧಿಕಾರಿ ರಾಜ್‌ಕುಮಾರ್ ಅವರು, “ಯಾರೂ ಸಹ ಆರ್‌ಟಿಒ ನಿಯಮಗಳನ್ನು ಗಾಳಿಗೆ ತೂರಿ ವಾಹನ ಚಲಾಯಿಸಬಾರದು. ಫಿಟ್‌ನೆಸ್ ಸರ್ಟಿಫಿಕೇಟ್, ವಿಮೆ ಮತ್ತು ಪರವಾನಗಿಗಳ ಪರಿಶೀಲನೆಯನ್ನು ಮೈಸೂರಿನಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಮುಂದುವರಿಸಲಾಗುವುದು,” ಎಂದು ತಿಳಿಸಿದ್ದಾರೆ.
