ಚಿಕ್ಕಬಳ್ಳಾಪುರ, ಡಿಸೆಂಬರ್ 26, 2025 : ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಗ್ರಾಮದ ನಾಲ್ವರು ಯುವಕರು ಮೃತಪಟ್ಟಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗೇಟ್ ಬಳಿ ಸಂಭವಿಸಿದೆ. ಘಟನೆ ಸಂಬಂಧ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದು, ತಲಾ 5 ಲಕ್ಷ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.

ಅಪಘಾತದಲ್ಲಿ ಅಣ್ಣ ತಮ್ಮಂದಿರಾದ ನರಸಿಂಹಮೂರ್ತಿ ಹಾಗೂ ನಂದೀಶ್ ಸೇರಿದಂತೆ ಅರುಣ್, ಮನೋಜ್ ಎಂಬುವವರು ಮೃತಪಟ್ಟಿದ್ದಾರೆ.ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಈ ನಾಲ್ವರು ಚಿಕ್ಕಬಳ್ಳಾಪುರ ನಗರದ ಚರ್ಚ್‌ಗಳಿಗೆ ಭೇಟಿ ನೀಡಿ ಮರಳಿ ಸ್ವಗ್ರಾಮದತ್ತ ವಾಪಸ್ಸಾಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.
ನರಸಿಂಹಮೂರ್ತಿಗೆ ಸೇರಿದ ಸಿಟಿ 100 ಬೈಕಿನಲ್ಲಿ ನಾಲ್ವರು ಹೊರಟಿದ್ದು, ಕೆಲ ನಿಮಿಷಗಳಲ್ಲಿ ಅಜ್ಜವಾರ ಗ್ರಾಮಕ್ಕೆ ಹೈವೇಯಿಂದ ಬಲ ತಿರುವು ಪಡೆದುಕೊಳ್ಳಬೇಕಿತ್ತು. ಅಷ್ಟರಲ್ಲೇ ಟಿಪ್ಪರ್ ಲಾರಿ ಅಡ್ಡ ಬಂದಿದ್ದು, ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ನಾಲ್ವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದು, ಬೈಕ್ ನಜ್ಜುಗುಜ್ಜಾಗಿದೆ.
ಅಪಘಾತದ ವಿಚಾರ ತಿಳಿದ ಚಿಕ್ಕಬಳ್ಳಾಪುರ ಪೊಲೀಸರು ಸ್ಥಳ ಪರಿಶೀಲಿಸಿ, ಮೃತ ದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದಾರೆ.ಇನ್ನು ಘಟನೆ ಬಳಿಕ ಟಿಪ್ಪರ್ ಚಾಲಕ ಪರಾರಿಯಾಗಿದ್ದು, ಸದ್ಯ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಟಿಪ್ಪರ್ ವಶಕ್ಕೆ ಪಡೆದು, ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇನ್ನು ಈ ಬಗ್ಗೆ ಸಂತಾಪ ಸೂಚಿಸಿರುವ ಸಿಎಂ ಸಿದ್ದರಾಮಯ್ಯ, ಕ್ರಿಸ್ಮಸ್ ಸಂಭ್ರಮದಲ್ಲಿದ್ದ ಕುಟುಂಬಗಳು ಹೀಗೆ ಸೂತಕದ ಮನೆಯಾಗಿ ಬದಲಾದುದ್ದು ದುರದೃಷ್ಟಕರ. ಮನೆಗೆ ಆಧಾರವಾಗಿದ್ದ ಈ ಹುಡುಗರ ನಿಧನದಿಂದ ಸಂಕಷ್ಟದಲ್ಲಿರುವ ಅವರ ಕುಟುಂಬಕ್ಕೆ ನೆರವಾಗಲು ತಲಾ ರೂ.5 ಲಕ್ಷ ಪರಿಹಾರ ನೀಡುತ್ತಿದ್ದೇವೆ. ತಮ್ಮವರನ್ನು ಕಳೆದುಕೊಂಡು ನೋವಿನಲ್ಲಿರುವ ಜೀವಗಳಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ. https://x.com/siddaramaiah/status/2004445096260128922?s=20
