ಮಂಡ್ಯ, ಸೆಪ್ಟೆಂಬರ್ 30: ತೀವ್ರ ಬರಗಾಲದ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆರೆ-ಕಟ್ಟೆಗಳಲ್ಲಿ ನೀರಿಲ್ಲದೆ ಪರದಾಟ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೂ ಜನ ಕಷ್ಟ ಆಲಿಸುವ ಬದಲು ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಮೆರಿಕಗೆ ತೆರಳಿದ್ದಾರೆ. ಹೀಗಾಗಿ ಶಾಸಕರನ್ನು ಭೇಟಿಯಾಗಲು ತೆರಳಬೇಕಿರುವ ಕಾರಣ ನಮಗೆ ಉಚಿತ ವೀಸಾ ಮಾಡಿಕೊಡಿ ಎಂದು ಜನರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಪ್ರಸಂಗ ನಡೆದಿದೆ. ಶಾಸಕರು ಪದೇ ಪದೇ ವಿದೇಶಕ್ಕೆ ಹೋಗುತ್ತಾರೆ. ಎಂಎಲ್ಎ ಆದಾಗಿನಿಂದ 18 ಬಾರಿ ಅಮೆರಿಕಕ್ಕೆ ತೆರಳಿದ್ದಾರೆ ಎಂದೂ ದೂರಲಾಗಿದೆ.
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ವಿದೇಶದಲ್ಲಿರುವ ಕಾರಣ ಅವರನ್ನು ವಿದೇಶದಲ್ಲಿ ಭೇಟಿ ಯಾಗಲು ಅನುಕೂಲವಾಗುವಂತೆ ಕ್ಷೇತ್ರದ ಎಲ್ಲಾ ಜನರಿಗೆ ಉಚಿತ ವೀಸಾ ಮಾಡಿಕೊಡುವಂತೆ ಮನವಿ ಮಾಡುತ್ತೇವೆ. ದರ್ಶನ್ ಪುಟ್ಟಣ್ಣಯ್ಯರವರ ಕುಟುಂಬ ವಿದೇಶದಲ್ಲಿ ನೆಲೆಸಿರುವ ಹಿನ್ನೆಲೆಯಲ್ಲಿ ಅವರು ಹೆಚ್ಚಿನ ಸಮಯವನ್ನು ವಿದೇಶದಲ್ಲಿ ಕಳೆಯುತ್ತಿರುವುದಿಂದ ಕ್ಷೇತ್ರದ ಜನರ ಸಮಸ್ಯೆ ಆಲಿಸಲು ಶಾಸಕರು ಇಲ್ಲದಂತಾಗಿದೆ. ಕ್ಷೇತ್ರಕ್ಕೆ ಬಂದಾಗ ನಾಲೈದು ಹಳ್ಳಿಗೆ ತೆರಳಿ ಕಾಮಗಾರಿ ಗುದ್ದಲಿ ಪೂಜೆ ನಡೆಸಿ ಅದನ್ನೇ ವೈಭವಿಕರಿಸಿಕೊಂಡು ಕಾಲ ಕಳೆಯುತ್ತಿದ್ದಾರೆ. ಬರಗಾಲ ಎದುರಾಗಿ ರೈತರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಕೆರೆ ಕಟ್ಟೆಗಳಲ್ಲಿ ನೀರಿಲ್ಲ, ಜಾನುವಾರುಗಳು ಕುಡಿಯಲು ನೀರಿಲ್ಲದೆ ಪರಿತಪಿಸುತ್ತಿದೆ. ಹೇಮಾವತಿ ನಾಲೆಗಳಿಗೆ ನೀರು ಹರಿಸಿ ಕೆರೆ ಕಟ್ಟೆ ತುಂಬಿಸಲು ಒತ್ತಡ ಹಾಕಬೇಕಾದ ಶಾಸಕರು KRS ನೀರೆಲ್ಲ ತಮಿಳುನಾಡಿಗೆ ಹರಿದು ಹೋಗುತ್ತಿದ್ದರೂ ಕಂಡು ಕಾಣದಂತಿದ್ದಾರೆ. ಸರ್ಕಾರ ಪಾಂಡವಪುರ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಮೀನಾ ಮೇಷ ಮಾಡಿದ್ದು, ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಎರಡನೇ ಪಟ್ಟಿಯಲ್ಲಿ ಬರಪೀಡಿತ ತಾಲೂಕು ಎಂದು ಘೋಷಿಸಿರುವುದು ಶಾಸಕರ ವೈಫಲ್ಯತೆಯನ್ನು ತೋರ್ಪಡಿಸಿದೆ.
