ಮೈಸೂರು, ಡಿಸೆಂಬರ್ 22, 2025 : ಜಗತ್ಪ್ರಸಿದ್ಧ ಮೈಸೂರಿನ ಅರಮನೆ ಅಂಗಳದಲ್ಲೀಗ ಪುಷ್ಪ ಲೋಕವೇ ಅನಾವರಣಗೊಂಡಿದೆ. ಅರಮನೆ ಆಡಳಿತ ಮಂಡಳಿ 10 ದಿನಗಳ ಕಾಲ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಇದೀಗ ಚಾಲನೆ ದೊರಕಿದೆ.
ವರ್ಷಾಂತ್ಯದಲ್ಲಿ ಕ್ರಿಸ್‌ಮಸ್ ಹಬ್ಬದ ಜೊತೆಗೆ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂಭ್ರಮ ಇಮ್ಮಡಿಗೊಳಿಸಿದ್ದು, ದೇಶ ವಿದೇಶಗಳ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಅರಮನೆ ಅಂಗಳದಲ್ಲಿ ಮಾಗಿ ಉತ್ಸವವನ್ನು ಆಯೋಜಿಸಲಾಗಿದೆ. ಮಾಗಿ ಉತ್ಸವದ ಪ್ರಮುಖ ಆಕರ್ಷಣೆಯಾಗಿರುವ ಫಲಪುಷ್ಪ ಪ್ರದರ್ಶನಕ್ಕೆಪ್ರವಾಸಿಗರು ಸ್ಥಳೀಯ ನಿವಾಸಿಗಳು ಮನೋಸೋತಿದ್ದಾರೆ.

ಸುಮಾರು ನಾಲ್ಕು ಲಕ್ಷ ಹೂವುಗಳ ವಿವಿಧ ಕಲಾಕೃತಿಗಳ ನಿರ್ಮಾಣ…25 ಸಾವಿರ ವಿವಿಧ ಜಾತಿಯ ಹೂವಿನ ಗಿಡಗಳ ಕುಂಡಗಳು…ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಹೂವುಗಳಿಂದಲೇ ಅರಳಿರುವ ಶೃಂಗೇರಿ ಶಾರದೆ ಮಾತೆಯ ದೇವಾಲಯ…ಹೌದು, ಅರಮನೆ ಅಂಗಳದಲ್ಲಿ ಅರಮನೆ ಮಂಡಳಿ ವತಿಯಿಂದ ಮಾಗಿ ಉತ್ಸವ ಜನಮನ ಸೂರೆಗೊಳ್ಳುತ್ತಿದೆ. ಮಾಗಿ ಉತ್ಸವದ ಪ್ರಯುಕ್ತ ಫಲಪುಷ್ಪ ಪ್ರದರ್ಶನ ಆಯೋಜಿಸಿದ್ದು, ಜೊತೆಗೆ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಿವೆ. ಕ್ರಿಸ್‌ಮಸ್ ರಜೆ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರವಾಸಿಗರು ಮೈಸೂರಿಗೆ ಲಗ್ಗೆ ಇಡುತ್ತಿದ್ದು, ಪ್ರವಾಸಿಗರು ಮಾತ್ರವಲ್ಲದೇ ಮೈಸೂರಿಗರಿಗಾಗಿ 10 ದಿನಗಳ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಡಿಸೆಂಬರ್ 31ರವರೆಗೆ ನಿತ್ಯ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಪ್ರವಾಸಿಗರು, ನಾಗರೀಕರು ಹೂವುಗಳ ಲೋಕವನ್ನು ಕಣ್ತುಂಬಿಕೊಳ್ಳ ಬಹುದಾಗಿದೆ.
ಮಾಗಿ ಉತ್ಸವದ ವೈವಿಧ್ಯಮಯ ಫಲಪುಷ್ಪ ಪ್ರದರ್ಶನಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಅಧಿಕಾರಿಗಳು ಚಾಲನೆ ನೀಡಿದ್ದಾರೆ. ವಿವಿಧ ಜಾನಪದ ಕಲಾತಂಡಗಳು, ವಾದ್ಯ ವೃಂದ, ಅರಮನೆಯ ಆನೆಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿವೆ. ವಾರಾಂತ್ಯವಾದ್ದರಿಂದ ಮೊದಲ ದಿನವೇ ಸಾವಿರಾರು ಜನರು ಅರಮನೆಗೆ ಭೇಟಿ ನೀಡಿ ಫಲಪುಷ್ಪ ಪ್ರದರ್ಶನ ವೀಕ್ಷಿಸಿದರು. ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಶೃಂಗೇರಿಯ ಶಾರದೆ ಮಾತೆಯ ದೇವಸ್ಥಾನದ ಮಾದರಿಯ ಹೂವಿನ ಕಲಾಕೃತಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಶೃಂಗೇರಿ ಶಾರದೆ ಮಾತೆಯ ದೇಗುಲದ ಮಾದರಿ 50 ಅಡಿ ಅಗಲ, 16 ಅಡಿ ಉದ್ದ ಹಾಗೂ 25 ಅಡಿ ಎತ್ತರ ಇದ್ದು, ಗುಲಾಬಿ, ಸೇವಂತಿಗೆ ಸೇರಿದಂತೆ ಲಕ್ಷಾಂತರ ಹೂವುಗಳಿಂದ ವಿಶಿಷ್ಟವಾಗಿ ನಿರ್ಮಿಸಿದ್ದು, ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಫಲಪುಷ್ಪ ಪ್ರದರ್ಶನದ ಪ್ರವೇಶದ್ವಾರ ಮತ್ತು ಹೊರ ಹೋಗುವ ದ್ವಾರವನ್ನು ಹೂವು, ಗರಿ, ಚಪ್ಪರದಿಂದ ಅಲಂಕರಿಸಲಾಗಿದೆ. ದಿವಂಗತ ಸಾಲುಮರದ ತಿಮ್ಮಕ್ಕ ಅವರ ಭಾವಚಿತ್ರ ಹೂವು, ಸಿರಿಧಾನ್ಯದಿಂದ ಸಿದ್ದಗೊಂಡಿದೆ. ಅರಮನೆ ಮಂಡಳಿಯ ಕಚೇರಿಯಲ್ಲಿರುವ ಮೈಸೂರು ಸಂಸ್ಥಾನದ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಮಾದರಿ ಚಿತ್ರ, ಭಾರತದ ಸಂವಿಧಾನ ಪುಸ್ತಕದ ವಿನ್ಯಾಸಗಳು ರೂಪುಗೊಂಡಿವೆ. ವಿವಿಧ ಹಣ್ಣು ಮತ್ತು ತರಕಾರಿ ಕೆತ್ತನೆಗಳಿಂದ ಗಣ್ಯ ವ್ಯಕ್ತಿಗಳು ಹಾಗೂ ಪ್ರಾಣಿ, ಪಕ್ಷಿಗಳು ಕೃಷ್ಣ ಮತ್ತು ರಾಧೆ ಉಯ್ಯಾಲೆಯಲ್ಲಿ ಕುಳಿತು ವಿಹರಿಸುತ್ತಿರುವ ಮಾದರಿಯಲ್ಲಿ ಹೂವಿನಿಂದ ಅಲಂಕರಿಸಲಾಗಿದೆ.
ಇನ್ನೂ 2025ರಲ್ಲಿ ಭಾರತದ ಮಹಿಳಾ ಕ್ರಿಕೆಟಿಗರು ಗೆದ್ದ ಟ್ರೋಫಿಯ ಮಾದರಿಯನ್ನು ಹೂವಿನಿಂದ ಅಲಂಕರಿಸಲಾಗಿದೆ. ಕ್ರಿಕೆಟ್, ಖೋಖೋ, ಕಬಡ್ಡಿ, ಅಂಧರ ಕ್ರಿಕೆಟ್ ಗೆದ್ದ ಆಟಗಾರರ ಭಾವ ಚಿತ್ರಗಳ ಡಿಜಿಟಲ್ ಬೋರ್ಡ್ ಅಳವಡಿಡಲಾಗಿದೆ. ಯುದ್ಧ ಟ್ಯಾಂಕರ್, ಹಡಗು, ನೇವಿ ಫೈಟರ್ ಜೆಟ್ ಗಳ ಮಾದರಿ ಚಿತ್ರ, ನವಿಲುಗಳು, ಛೋಟಾ ಭೀಮ್, ಕಾಳಿಂಗ ಮರ್ಧನ, ಅಳಿಲು ಸೈಕಲನ್ನು ಓಡಿಸುತ್ತಿರುವ ಚಿತ್ರಗಳು, ಹಂಸ ಮಾದರಿಯ ಸೆಲ್ಪಿ ಪಾಯಿಂಟ್‌ಗಳನ್ನು ಸಿದ್ಧಪಡಿಸಲಾಗಿದೆ.
ಫಲಪುಷ್ಪ ಪ್ರದರ್ಶನವನ್ನು ಆಕರ್ಷಕವಾಗಿಸಲು ವಿವಿಧ ಆಕೃತಿಗಳ ತಾಜಾತನ ಕಾಪಾಡಲು ಒಂದು ಬಾರಿ ಹೂವು, ತರಕಾರಿಗಳನ್ನು ಬದಲಾಯಿಸಲಾಗುತ್ತದೆ. ಅರಮನೆಯ ವರಾಹ ಉದ್ಯಾನದಲ್ಲಿರುವ ವರ್ಟಿಕಲ್ ಗಾರ್ಡನ್‌ನಲ್ಲಿ ಸುಮಾರು 25 ಸಾವಿರ ವಿಭಿನ್ನ ರೀತಿಯ ಅಲಂಕಾರಿಕ ಹೂವಿನ ಕುಂಡಗಳನ್ನು ಜೋಡಣೆ ಮಾಡಲಾಗಿದೆ. ಮಾರಿಗೋಲ್ಡ್, ಸಾಲ್ವಿಯ, ಡೇಲಿಯ, ಪಿಟೋನಿಯ, ಕೋಲಿಯಸ್, ಸಿಲೋಷಿಯ, ಕಾಶಿಗೊಂಡೆ, ಆಸ್ಟರ್ ಸೇರಿದಂತೆ 35 ಜಾತಿಯ ಹೂವಿನ ಗಿಡಗಳು, ಗುಲಾಬಿ, ಕ್ರೈಸಾಂಥಿಮಂ, ಪಿಂಗ್ ಪಾಂಗ್, ಕಾರ್ನೆಷಲ್, ಅಸ್ಟ್ರಮೇರಿಯ, ಜರ್ಬೆರಾ ಸೇರಿದಂತೆ ಅಂದಾಜು ಸುಮಾರು 4 ಲಕ್ಷ ಹೂವುಗಳು, 35 ಸಾವಿರ ಜಾತಿಯ ಗಿಡಗಳನ್ನು ಬಳಸಿ ವೈವಿಧ್ಯಮಯ ಅಲಂಕಾರ ಮಾಡಲಾಗಿದೆ.
ಇನ್ನು ಫಲಪುಷ್ಪ ಪ್ರದರ್ಶನ ಉದ್ಘಾಟನೆಯಾದ ಬಳಿಕ ಅರಮನೆ ಮುಂಭಾಗ ನಿರ್ಮಾಣವಾಗಿದ್ದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೂ ಚಾಲನೆ ಪಡೆದುಕೊಂಡಿತು. ಡಿಸೆಂಬರ್ 25ರವರೆಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ.
