ಮೈಸೂರು, ಡಿಸೆಂಬರ್ 3, 2025 : ಚಳಿಗಾಲದ ತಂಪು ವಾತಾವರಣ ಪ್ರಾರಂಭವಾಗಿರುವ ಈ ಸಮಯದಲ್ಲಿ, ಬೆಚ್ಚನೆಯ ಆಶ್ರಯವನ್ನು ಹುಡುಕಿಕೊಂಡು ಜನವಸತಿ ಪ್ರದೇಶದತ್ತ ಉರಗಗಳ ಆಗಮನ ಹೆಚ್ಚಾಗುತ್ತಿದ್ದು, ಜನರು ಶೂ ಮತ್ತು ಚಪ್ಪಲಿ ಧರಿಸುವಾಗ ಎಚ್ಚರದಿಂದ ಇರುವಂತೆ ಉರಗ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಮೈಸೂರಿನ ಹೂಟಗಳ್ಳಿಯಲ್ಲಿರುವ ಮನೆಯೊಂದರಲ್ಲಿ ಇಂತಹುದೇ ಆತಂಕಕಾರಿ ಘಟನೆಯೊಂದು ವರದಿಯಾಗಿದೆ. ಮನೆಯ ಸದಸ್ಯರು ಶೂ ಧರಿಸಲು ಹೋದಾಗ ಅದರೊಳಗೆ ನಾಗರಹಾವಿನ ಮರಿ ಅಡಗಿಕೊಂಡಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ತಕ್ಷಣವೇ ಮನೆಮಂದಿ ಖ್ಯಾತ ಉರಗ ಸಂರಕ್ಷಕ ಹಾಗೂ ಉರಗ ತಜ್ಞರಾದ ಸ್ನೇಕ್ ಶಾಮ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸ್ನೇಕ್ ಶಾಮ್ ಅವರು ಯಾವುದೇ ಅಪಾಯವಾಗದಂತೆ ಶೂ ಒಳಗೆ ಅಡಗಿದ್ದ ನಾಗರಹಾವಿನ ಮರಿಯನ್ನು ಯಶಸ್ವಿಯಾಗಿ ರಕ್ಷಣೆ ಮಾಡಿದ್ದಾರೆ. ರಕ್ಷಿಸಿದ ನಂತರ, ಹಾವು ಮರಿಗೆ ಸೂಕ್ತವಾದ ಮತ್ತು ಸುರಕ್ಷಿತವಾದ ಪ್ರದೇಶದಲ್ಲಿ ಅದನ್ನು ಬಿಟ್ಟು ಬಂದಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ, ಸ್ನೇಕ್ ಶಾಮ್ ಅವರು ಸಾರ್ವಜನಿಕರಿಗೆ ಮಹತ್ವದ ಕರೆ ನೀಡಿದ್ದಾರೆ. ಜನರು ತಮ್ಮ ಮನೆಗಳ ಮುಂಭಾಗ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಬಳಸದೆ ಇರುವ ವಸ್ತುಗಳು, ಮರದ ದಿಮ್ಮಿಗಳು ಮತ್ತು ಕಸವನ್ನು ರಾಶಿ ಹಾಕುವುದರಿಂದ ಹಾವುಗಳಿಗೆ ಅಡಗಿಕೊಳ್ಳಲು ಸ್ಥಳ ಒದಗಿಸಿದಂತಾಗುತ್ತದೆ. ಶೂ ಅಥವಾ ಚಪ್ಪಲಿಗಳನ್ನು ಧರಿಸುವ ಮೊದಲು ಅದನ್ನು ಒಮ್ಮೆ ಪರಿಶೀಲಿಸಿ ಧರಿಸುವುದು ಉತ್ತಮ.
