ಚಾಮರಾಜನಗರ, ನವೆಂಬರ್ 20, 2025 : ರಾಜ್ಯದಲ್ಲಿ ಚಾಲ್ತಿಯಲ್ಲಿರುವ ರಾಜಕೀಯ ಊಹಾಪೋಹಾಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಚಾಮರಾಜನಗರದಲ್ಲಿ ಸ್ಪಷ್ಟ ಹೇಳಿಕೆ ನೀಡಿದ್ದಾರೆ. ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎಂಬ ಅಪನಂಬಿಕೆಯನ್ನು ಗಣನೆಗೆ ತೆಗೆದುಕೊಳ್ಳದೆ, ಅವರು ತಮ್ಮ ಸರ್ಕಾರದ ಅಧಿಕಾರವು ಮತ್ತಷ್ಟು ಗಟ್ಟಿಯಾಗಿದೆ ಎಂದು ಘೋಷಿಸಿದರು.
ಚಾಮರಾಜನಗರದಲ್ಲಿ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ನಾನು ಮೌಢ್ಯಗಳು ಮತ್ತು ಕಂದಾಚಾರದ ಮೇಲೆ ನಂಬಿಕೆ ಇಟ್ಟಿಲ್ಲ. ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎಂಬ ಅಪನಂಬಿಕೆ ಇತ್ತು. ಆದರೆ ಚಾಮರಾಜನಗರಕ್ಕೆ ಬಂದ್ರು ಒಂದೇ, ಮೈಸೂರಿಗೆ ಬಂದ್ರು ಒಂದೇ. ಕರ್ನಾಟಕದ 31 ಜಿಲ್ಲೆಗಳಿಗೂ ನಾನು ಹೋಗುತ್ತೇನೆ ಬರುತ್ತೇನೆ.ಯಾರೆಲ್ಲಾ ಚಾಮರಾಜನಗರಕ್ಕೆ ಬರಬಾರದು ಎಂದು ಹೇಳಿದ್ರೋ ಅವರಿಗೆ ಅರಿವಾಗಬೇಕು. ಚಾಮರಾಜನಗರಕ್ಕೆ ಬಂದ್ರೆ ಅಧಿಕಾರ ಹೋಗುತ್ತದೆ ಅಂತಿದ್ರು, ಆದರೆ ನನ್ನ ಅಧಿಕಾರ ಮತ್ತಷ್ಟು ಗಟ್ಟಿಯಾಗಿದೆ.
ನವೆಂಬರ್ ಕ್ರಾಂತಿಯೂ ಇಲ್ಲ, ಬ್ರಾಂತಿನೂ ಇಲ್ಲ ಜನ ನಮಗೆ ಐದು ವರ್ಷಕ್ಕೆ ಅಧಿಕಾರ ಕೊಟ್ಟಿದ್ಧಾರೆ. ಮತ್ತೆ ಚುನಾವಣೆ ಗೆದ್ದು ಅಧಿಕಾರಕ್ಕೆ ಬರುತ್ತೇವೆ. ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಜನ ನಮಗೆ 5 ವರ್ಷ ಅಧಿಕಾರ ಕೊಟ್ಟಿದ್ದಾರೆ. ನಾನು ಅನಾವಶ್ಯಕವಾಗಿ ಚರ್ಚೆ ನಡೆಯುತ್ತಿದೆ. ಹೈಕಮಾಂಡ್‌ಗೆ ರಿಷಫಲ್‌ಗೆ ಎರಡುವರೆ ವರ್ಷ ಆಗಲಿ ಎಂದು ಹೇಳಿದ್ದೆ. ಆ ಹೇಳಿಕೆಯಿಂದ ಚರ್ಚೆಗಳು ಹುಟ್ಟಿಕೊಂಡಿವೆ. ಪುನರ್‌ರಚನೆ ಮಾಡುವ ಬಗ್ಗೆ ಮಾತ್ರ ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಸದ್ಯಕ್ಕೆ ಪುನಾರಚನೆಯೂ ಇಲ್ಲ. ಅದರ ಬಗ್ಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ರಾಹುಲ್ ಗಾಂಧಿ ಅವರ ಜೊತೆ ಮಾತನಾಡಿ ಹೇಳುತ್ತೇನೆ ಎಂದಿದ್ದಾರೆ.ಜನ ಎಲ್ಲಿಯವರೆಗೆ ಅಪೇಕ್ಷೆ ಪಡುತ್ತಾರೋ ಅಲ್ಲಿಯವರೆಗೆ ಬಜೆಟ್ ಮಂಡನೆ ಮಾಡುತ್ತೇನೆ.2028ರ ಚುನಾವಣೆಯನ್ನು ತಮ್ಮದೇ ನೇತೃತ್ವದಲ್ಲಿ ಎದುರಿಸುವ ವಿಚಾರದ ಬಗ್ಗೆ ಕೇಳಿದಾಗ, ಸಿಎಂ ಸಿದ್ದರಾಮಯ್ಯ, ಅದನ್ನು ಚುನಾವಣೆ ಬಂದಾಗ ನೋಡೋಣ,” ಎಂದು ಉತ್ತರಿಸಿದರು.
ಬೆಂಗಳೂರಿನಲ್ಲಿ ನಡೆದ ಬ್ಯಾಂಕ್ ಹಣ ದರೋಡೆ ಪ್ರಕರಣದ ಆರೋಪಿಗಳ ಸುಳಿವು ಸಿಕ್ಕಿದೆ. ಕಾರು ಸಹ ಸಿಕ್ಕಿದೆ. ಆರೋಪಿಗಳನ್ನು ಪತ್ತೆ ಹಚ್ಚುತ್ತೇವೆಂದು ಇದೇ ವೇಳೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಕೆ. ವೆಂಕಟೇಶ್ ಮತ್ತು ಡಾ. ಹೆಚ್.ಸಿ. ಮಹದೇವಪ್ಪ, ಸಂಸದ ಸುನೀಲ್ ಬೋಸ್, ಶಾಸಕರಾದ ಜಿ.ಟಿ. ದೇವೇಗೌಡ, ಪುಟ್ಟರಂಗಶೆಟ್ಟಿ, ದರ್ಶನ್ ಧ್ರುವನಾರಾಯಣ್ ಸೇರಿದಂತೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಕಾಂಗ್ರೆಸ್ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
