ಮೈಸೂರು, ಜನವರಿ 30,2026 : ಬ್ಯಾಂಕ್‌ಗೆ ನಕಲಿ ಚಿನ್ನಾಭರಣಗಳನ್ನು ಗಿರವಿ ಇಟ್ಟು ಸುಮಾರು 56.78 ಲಕ್ಷ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ. ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ತಮಿಳುನಾಡು ಮೂಲದ ಮರ್ಕೆಂಟೈಲ್ ಬ್ಯಾಂಕ್‌ಗೆ ಈ ಉಂಡೆನಾಮ ಹಾಕಲಾಗಿದ್ದು, ಬ್ಯಾಂಕ್‌ನ ಮುಖ್ಯಸ್ಥ ಸುರೇಶ್ ಕಣ್ಣನ್ ಅವರು ನೀಡಿದ ದೂರಿನ ಮೇರೆಗೆ ದೇವರಾಜ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ಈ ಬೃಹತ್ ವಂಚನೆಗೆ ಸಂಬಂಧಿಸಿದಂತೆ ಮೈಸೂರಿನ ಅಬ್ದುಲ್ ಜಮೀಲ್, ಮಂಡ್ಯದ ಸಾಗರ್, ಪುಟ್ಟರಾಜು, ರವಿಕುಮಾರ್, ಆತನ ಪತ್ನಿ ದಿವ್ಯ, ಬೆಂಗಳೂರಿನ ನಾಗರತ್ನರೆಡ್ಡಿ ಹಾಗೂ ಮೌಲ್ಯಮಾಪಕ (Appraiser) ಟಿ. ನರಸೀಪುರದ ರವೀಂದ್ರ ಕುಮಾರ್ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಕಳೆದ 2024ರ ಮಾರ್ಚ್ 14ರಂದು ಆರು ಆರೋಪಿಗಳ ಹೆಸರಿನಲ್ಲಿ ಒಟ್ಟು 782 ಗ್ರಾಂ ಚಿನ್ನಾಭರಣಗಳನ್ನು ಗಿರವಿ ಇಟ್ಟು 56,78,000 ರೂಪಾಯಿ ಸಾಲ ಪಡೆಯಲಾಗಿತ್ತು. ಆದರೆ, 2026ರ ಜನವರಿ 14ರಂದು ರಮೇಶ್ ಎಂಬುವವರು ಬ್ಯಾಂಕ್‌ಗೆ ಭೇಟಿ ನೀಡಿ ಒಡವೆಗಳನ್ನು ಮರು ಮೌಲ್ಯಮಾಪನ ಮಾಡಿದಾಗ, ಇವು ಅಸಲಿ ಚಿನ್ನವಲ್ಲ ಬದಲಿಗೆ ನಕಲಿ ಎಂಬ ಸತ್ಯ ಬಯಲಾಗಿದೆ. ಮೌಲ್ಯಮಾಪಕನೂ ಈ ವಂಚನೆಯಲ್ಲಿ ಕೈಜೋಡಿಸಿರುವುದು ಬ್ಯಾಂಕ್ ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
