ಮೈಸೂರು, ಅಕ್ಟೋಬರ್ 17: ದಸರಾ ಮಹೋತ್ಸವದ ವೇಳೆ ಇಡೀ ರಾಜ್ಯವನ್ನೇ ನಡುಗಿಸಿದ್ದ 9 ವರ್ಷದ ಬಾಲಕಿಯ ಮೇಲಿನ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ. ಕೃತ್ಯ ಎಸಗಿದ ಅಪರಾಧಿ ಕಾರ್ತಿಕ್ (32) ಎಂಬಾತನಿಗೆ ಗಲ್ಲು ಶಿಕ್ಷೆ (ಮರಣದಂಡನೆ) ವಿಧಿಸಿ ಮೈಸೂರಿನ ನ್ಯಾಯಾಲಯದ ನ್ಯಾಯಾಧೀಶರಾದ ಅನಿಲ್ ಪಿ. ವಘಾಢೆಯವರಿದ್ದ ಪೀಠ ತೀರ್ಪು ಪ್ರಕಟಿಸಿದೆ.
ಕಳೆದ ವರ್ಷ ಮೈಸೂರು ದಸರಾ ಮಹೋತ್ಸವದ ಸಮಯದಲ್ಲಿ ವ್ಯಾಪಾರಕ್ಕಾಗಿ ಕಲಬುರಗಿಯಿಂದ ಕುಟುಂಬವೊಂದು ಮೈಸೂರಿಗೆ ಬಂದಿತ್ತು. ಈ ಕುಟುಂಬದ 9 ವರ್ಷದ ಪುಟ್ಟ ಬಾಲಕಿ ದಸರಾ ವಸ್ತುಪ್ರದರ್ಶನದ ಆವರಣದ ಬಳಿ ಬಲೂನ್ ಮಾರಾಟ ಮಾಡುತ್ತಿದ್ದಳು. ರಾತ್ರಿ ವೇಳೆ ಬಾಲಕಿ ತನ್ನ ಕುಟುಂಬದೊಂದಿಗೆ ಟೆಂಟ್ನಲ್ಲಿ ನಿದ್ರಿಸುತ್ತಿದ್ದಾಗ, ಅಪರಾಧಿ ಕಾರ್ತಿಕ್ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿದ್ದ. ಬಳಿಕ ಆಕೆಯ ಮೇಲೆ ಕ್ರೂರವಾಗಿ ಅತ್ಯಾಚಾರ ಎಸಗಿ, ಭೀಕರವಾಗಿ ಕೊಲೆ ಮಾಡಿ ಮೃತದೇಹವನ್ನು ಬಿಟ್ಟು ನಾಪತ್ತೆಯಾಗಿದ್ದ.
24 ಗಂಟೆಯಲ್ಲೇ ಆರೋಪಿ ಬಂಧನ
ಈ ಘಟನೆ ಇಡೀ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಕರಣದ ಗಂಭೀರತೆಯನ್ನು ಅರಿತ ಮೈಸೂರಿನ ನಜರಬಾದ್ ಪೊಲೀಸ್ ಠಾಣೆಯ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗಿ, ಘಟನೆ ನಡೆದ ಕೇವಲ 24 ಗಂಟೆಗಳ ಒಳಗಾಗಿ ಆರೋಪಿ ಕಾರ್ತಿಕ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
