ಮೈಸೂರು, ನವೆಂಬರ್ 15, 2025 : ಮೈಸೂರು ಜಿಲ್ಲೆಯಾದ್ಯಂತ ಇತ್ತೀಚೆಗೆ ನಿರಂತರವಾಗಿ ನಡೆಯುತ್ತಿರುವ ಹುಲಿ ದಾಳಿಗಳಿಂದಾಗಿ ಕಾಡಂಚಿನ ಗ್ರಾಮಗಳ ಜನರು ಬೆಚ್ಚಿ ಬಿದ್ದಿದ್ದಾರೆ. ಮಾನವ-ವನ್ಯಜೀವಿ ಸಂಘರ್ಷದ ಈ ಏರಿಕೆಗೆ ಪ್ರಮುಖವಾಗಿ ಹುಲಿಗಳ ಸಂಖ್ಯೆಯಲ್ಲಿನ ಹೆಚ್ಚಳವೇ ಕಾರಣವಾಗಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಬಂಡೀಪುರ ಮತ್ತು ನಾಗರಹೊಳೆ ಅಭಯಾರಣ್ಯಗಳಲ್ಲಿ ಹುಲಿಗಳ ಸಂತತಿ ಹೆಚ್ಚಳವಾಗಿರುವುದರಿಂದ, ಸೂಕ್ತ ನೆಲೆ ಮತ್ತು ಸಂಗಾತಿಗಾಗಿ ಹುಡುಕಾಟದಲ್ಲಿರುವ ವಯಸ್ಕ ಹುಲಿಗಳು ಅರಣ್ಯದಂಚು ಮತ್ತು ಜನವಸತಿ ಪ್ರದೇಶಗಳತ್ತ ಬರುತ್ತಿವೆ ಎಂದು ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ಪರಮೇಶ್ ಅವರು ಮಾಹಿತಿ ನೀಡಿದ್ದಾರೆ.

ಹುಲಿಗಳ ಸಂಖ್ಯೆ ಹೆಚ್ಚಿರುವುದರಿಂದ ಅವುಗಳು ಹೊಸ ನೆಲೆ ಹುಡುಕುತ್ತಾ ಹೊರಬರುತ್ತಿವೆ.ಅಲ್ಲದೆ ಇದೀಗ ಹುಲಿಗಳ ಮಿಲನದ ಸಮಯವೂ ಆಗಿರುವುದರಿಂದ, ಸಂಗಾತಿಗಳನ್ನು ಹುಡುಕಿಕೊಂಡು ಅವು ಜನವಸತಿ ಪ್ರದೇಶಗಳತ್ತ ಬರುತ್ತಿದ್ದು, ಈ ಸಂದರ್ಭದಲ್ಲಿ ಎದುರಾಗುವ ಮನುಷ್ಯರಿಂದ ತಮಗೆ ಅಪಾಯವಿದೆ ಎಂದು ಭಾವಿಸಿ ಹುಲಿಗಳು ದಾಳಿಗೆ ಮುಂದಾಗುತ್ತಿವೆ ಎಂದು ತಿಳಿಸಿದರು.
ನಾಡಿನಲ್ಲಿ ಸುಮಾರು 20 ಹುಲಿಗಳ ಅಲೆದಾಟ!
ಒಂದು ಅಂದಾಜಿನ ಪ್ರಕಾರ, ಸುಮಾರು 20 ಹುಲಿಗಳು ಕಾಡಿನಿಂದ ಹೊರಬಂದು ನಾಡಿನಲ್ಲಿ ಅಲೆದಾಡುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಹೆಚ್ ಡಿ ಕೋಟೆ ಭಾಗದಲ್ಲಿ 8, ಮೈಸೂರಿನ ಆಸುಪಾಸಿನಲ್ಲಿ 5 ಹುಲಿಗಳು ಓಡಾಟ. ಇದರ ಜೊತೆಗೆ ನಂಜನಗೂಡು, ಹುಣಸೂರು ಭಾಗವು ಸೇರಿದಂತೆ ಸುಮಾರು 20 ಹುಲಿಗಳು ಅಡ್ಡಾಡುತ್ತಿರುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯಿಂದ ವ್ಯಾಪಕ ಕಾರ್ಯಾಚರಣೆ
ಹುಲಿ ದಾಳಿಗಳು ಹೆಚ್ಚುತ್ತಿದ್ದಂತೆ, ಅರಣ್ಯ ಇಲಾಖೆ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಹುಲಿಗಳನ್ನು ಸೆರೆ ಹಿಡಿಯುತ್ತಿದ್ದಾರೆ. ಸೆರೆ ಹಿಡಿದ ಹುಲಿಗಳನ್ನು ಮೈಸೂರಿನ ಕೂರ್ಗಳ್ಳಿಯ ಪುನರ್ವಸತಿ ಕೇಂದ್ರ ಹಾಗೂ ಬೆಂಗಳೂರಿನ ಬನ್ನೇರುಘಟ್ಟ ಉದ್ಯಾನವನಕ್ಕೆ ರವಾನಿಸಲಾಗುತ್ತಿದೆ. ಜನವಸತಿ ಪ್ರದೇಶದ ಆಸುಪಾಸಿನಲ್ಲಿ ಅಲೆದಾಡುತ್ತಿರುವ ಹುಲಿಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ಡ್ರೋನ್ ಕ್ಯಾಮರಾ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಹುಲಿಗಳ ಚಲನವಲನಗಳನ್ನು ಗಮನಿಸಿ ಸೆರೆ ಹಿಡಿಯುವ ಕಾರ್ಯಾಚರಣೆ ಮುಂದುವರಿಸಲಾಗಿದೆ.
ಸಂಘರ್ಷ ತಡೆಗಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳ ತಂಡವು ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಭೀಮ, ಧನಂಜಯ ಸೇರಿದಂತೆ ನುರಿತ ಸಾಕಾನೆಗಳ ನೆರವಿನಿಂದ ಹುಲಿಗಳನ್ನು ಸೆರೆ ಹಿಡಿಯಲು ಶ್ರಮಿಸಲಾಗುತ್ತಿದೆ.ಹಾಗೂ ಹಲವೆಡೆ ಧ್ವನಿವರ್ಧಕಗಳ ಮೂಲಕ ಜನರಿಗೆ ಎಚ್ಚರಿಕೆಯ ಸಂದೇಶಗಳನ್ನು ರವಾನಿಸಿ, ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
