ಕನಕಪುರ: “ಯಾರೊಬ್ಬರೂ ಒಂದು ರೂಪಾಯಿ ಲಂಚ ಕೊಡಲು ಹೋಗಬೇಡಿ. ಲಂಚ ಕೇಳುವವರ ವಿರುದ್ಧ ದೂರು ನೀಡಲು ಸರ್ಕಾರಿ ಕಚೇರಿಗಳ ಮುಂದೆ ದೂರವಾಣಿ ಸಂಖ್ಯೆಯನ್ನು ಶೀಘ್ರದಲ್ಲೇ ಆರಂಭಿಸುತ್ತೇವೆ” ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.
ಕನಕಪುರದಲ್ಲಿ ನಡೆದ ಜನಸಂಪರ್ಕ ಸಭೆ ನಡೆಸಿ ಮಾತನಾಡಿದ ಅವರು, “ಕಂದಾಯ, ಪಂಚಾಯಿತಿ ಅಧಿಕಾರಿ ಸೇರಿದಂತೆ ಯಾವುದೇ ಸರ್ಕಾರಿ ಅಧಿಕಾರಿಗಳು ಲಂಚ ಕೇಳಿದರೆ ನೇರವಾಗಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ” ಎಂದರು.
ಡಿ ಕೆ ಶಿವಕುಮಾರ್ ಅವರು ಬೆಳಗಿನಿಂದ ಸಂಜೆವರೆಗೂ ಇಡೀ ದಿನ ಕನಕಪುರದ ಅಂಬೇಡ್ಕರ್ ಭವನದಲ್ಲಿ ಕುಳಿತು ಸುಮಾರು 1500 ಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಿದರು.
ಹೀಗೆ ಸಮಸ್ಯೆಗಲಿಗೆ ಪರಿಹಾರ ನೀಡುತ್ತಾ“ಕನಕಪುರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾಗುತ್ತಿದೆ, ಸ್ವಲ್ಪ ತಡವಾಗಬಹುದು ಆದರೆ ಆದಷ್ಟು ಬೇಗ ಜನರ ಸೇವೆಗೆ ಸಿಗಲಿದೆ. ತಾಯಿ- ಮಕ್ಕಳ ಆಸ್ಪತ್ರೆ ಉದ್ಘಾಟನೆಯಾಗಿ ಆರೋಗ್ಯದ ವಿಚಾರದಲ್ಲಿ ಜನರಿಗೆ ಉತ್ತಮ ಸೌಲಭ್ಯ ದೊರೆಯುತ್ತಿದೆ. ಆದಷ್ಟು ಬೇಗ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ತುಂಬಲಾಗುವುದು” ಎಂದು ತಿಳಿಸಿದರು.
ಶ್ರೀರಕ್ಷಾ ಎಂಬ ಯುವತಿ, ಕೆಲಸ ಮತ್ತು ವಿದ್ಯಾಭ್ಯಾಸ ನಿಮಿತ್ತ ಬಹಳಷ್ಟು ಮಂದಿ ನಿತ್ಯ ಬೆಂಗಳೂರಿಗೆ ಓಡಾಡುತಿದ್ದೇವೆ. ಗೃಹಲಕ್ಷ್ಮಿ ಯೋಜನೆ ಅಡಿ ಬರುವ ದುಡ್ಡು, ಮೆಟ್ರೋ ರೈಲಿಗೆ ಖರ್ಚಾಗುತ್ತಿದೆ. ಹೀಗಾಗಿ ಬೆಂಗಳೂರಿಂದ ಹಾರೋಹಳ್ಳಿವರೆಗೆ ಇರುವ ಬಿಎಂಟಿಸಿ ಬಸ್ ಸೌಲಭ್ಯವನ್ನು ಕನಕಪುರದವರೆಗೆ ವಿಸ್ತರಿಸಿ. ಬೆಳಗ್ಗೆ ಮತ್ತು ಸಂಜೆ 20 ಬಸ್ ಗಳ ಸಂಚಾರ ವ್ಯವಸ್ಥೆ ಮಾಡಿ ಎಂದು ಕೇಳಿಕೊಂಡರು. ಡಿಸಿಎಂ ಅವರು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತನಾಡುವುದಾಗಿ ಭರವಸೆ ನೀಡಿದರು.