ಟಿ ನರಸೀಪುರ, ಡಿಸೆಂಬರ್ 30, 2025 : ಪುಣ್ಯಕ್ಷೇತ್ರ ತಿರುಮಕೂಡಲು ನರಸೀಪುರದಲ್ಲಿ ಇಂದು ವೈಕುಂಠ ಏಕಾದಶಿಯ ಸಂಭ್ರಮ ಮನೆಮಾಡಿದೆ. ಇಲ್ಲಿನ ಐತಿಹಾಸಿಕ ಪ್ರಸಿದ್ಧ ಶ್ರೀ ಗುಂಜಾನರಸಿಂಹ ಸ್ವಾಮಿ ದೇವಾಲಯದಲ್ಲಿ ಏಕಾದಶಿ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ಅದ್ಧೂರಿಯಾಗಿ ನೆರವೇರಿದವು.

ಏಕಾದಶಿಯ ಪ್ರಯುಕ್ತ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ಧಾರ್ಮಿಕ ವಿಧಿವಿಧಾನಗಳು ಆರಂಭವಾದವು. ಸ್ವಾಮಿಗೆ ವಿಶೇಷ ಅಭಿಷೇಕ, ಅರ್ಚನೆ ಹಾಗೂ ಅಲಂಕಾರಗಳನ್ನು ಮಾಡಲಾಗಿತ್ತು. ಇಡೀ ದೇವಾಲಯದ ಆವರಣವು ವಿವಿಧ ಬಗೆಯ ಹೂವುಗಳಿಂದ ಮನಮೋಹಕವಾಗಿ ಕಂಗೊಳಿಸುತ್ತಿದ್ದು, ಭಕ್ತರ ಕಣ್ಮನ ಸೆಳೆಯುತ್ತಿದೆ.
ದಿನದ ಪ್ರಮುಖ ಆಕರ್ಷಣೆಯಾದ ‘ಸ್ವರ್ಗದ ಬಾಗಿಲು’ ಪ್ರವೇಶ ಕಾರ್ಯಕ್ರಮವು ಬೆಳಗಿನ ಜಾವ 5 ಗಂಟೆಗೆ ಸರಿಯಾಗಿ ನಡೆಯಿತು. ದೇವಾಲಯದ ಆವರಣದಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಸ್ವರ್ಗದ ಬಾಗಿಲ ಮೂಲಕ ಸಾವಿರಾರು ಭಕ್ತರು ಸಾಲಿನಲ್ಲಿ ನಿಂತು ಪ್ರವೇಶ ಮಾಡಿದರು. ಈ ಮೂಲಕ ವೈಕುಂಠ ಏಕಾದಶಿಯ ಪುಣ್ಯಫಲವನ್ನು ಪಡೆದರು.
ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು ಗುಂಜಾನರಸಿಂಹ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದೇವಾಲಯದ ಆಡಳಿತ ಮಂಡಳಿಯು ಸೂಕ್ತ ವ್ಯವಸ್ಥೆಗಳನ್ನು ಮಾಡಿತ್ತು. ಏಕಾದಶಿಯ ಹಿನ್ನೆಲೆಯಲ್ಲಿ ದಿನವಿಡೀ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ದೇವಾಲಯದ ಆವರಣದಲ್ಲಿ ಜರುಗಲಿವೆ.
