ಮೈಸೂರು (ಜುಲೈ 23, 2026): ಪ್ರಾಕೃತಿಕ ವಿಕೋಪಗಳಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಎಫ್‌ಸಿವಿ (FCV) ತಂಬಾಕು ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ತಂಬಾಕು ಮಂಡಳಿಯ ಮೂಲಕ ನೀಡಲಾಗುವ ಅನುದಾನ ಹಾಗೂ ಬಡ್ಡಿರಹಿತ ಸಾಲದ ಮೊತ್ತವನ್ನು ₹50,000 ದಿಂದ ₹75,000 ಕ್ಕೆ ಹೆಚ್ಚಿಸಿದೆ. ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ನಿರಂತರ ಶ್ರಮ ಮತ್ತು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯಕ್ಕೆ ಅವರು ಸಲ್ಲಿಸಿದ ಪರಿಣಾಮಕಾರಿ ಮನವಿಗಳಿಗೆ ಈ ಮಹತ್ವದ ಫಲ ಸಿಕ್ಕಿದೆ.
₹50,000 ದಿಂದ ₹75,000ಕ್ಕೆ ಆರ್ಥಿಕ ನೆರವು ಏರಿಕೆ: ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಅನುಭವಿಸಿರುವ ರೈತರ ಸಂಕಷ್ಟವನ್ನು ಮನಗಂಡು, ಸಂಸದ ಯದುವೀರ್ ಒಡೆಯರ್ ಅವರು ಕೇಂದ್ರ ಸರ್ಕಾರ ಮತ್ತು ತಂಬಾಕು ಮಂಡಳಿಯ ಮೇಲೆ ಒತ್ತಡ ತಂದಿದ್ದರು. ಇದರ ಪರಿಣಾಮವಾಗಿ ಪರಿಷ್ಕೃತ ಮಾರ್ಗಸೂಚಿಗಳಂತೆ ಬಡ್ಡಿರಹಿತ ಸಾಲ ಮತ್ತು ಅನುದಾನದ ಮೊತ್ತವನ್ನು ಹೆಚ್ಚಿಸಲಾಗಿದ್ದು, ಇತರೆ ನೆರವಿನ ವಿಭಾಗಗಳಲ್ಲೂ ಆರ್ಥಿಕ ಸಹಾಯವನ್ನು ವಿಸ್ತರಿಸಲಾಗಿದೆ.
ಈ ನಿರ್ಧಾರಕ್ಕೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹಾಗೂ ತಂಬಾಕು ಮಂಡಳಿಗೆ ಕೃತಜ್ಞತೆ ಸಲ್ಲಿಸಿದ ಯದುವೀರ್ ಒಡೆಯರ್, “ಈ ಸಕಾಲಿಕ ಸಹಾಯವು ಸಂಕಷ್ಟದಲ್ಲಿರುವ ಬೆಳೆಗಾರರ ಜೀವನೋಪಾಯವನ್ನು ಪುನರುಜ್ಜೀವನಗೊಳಿಸಲು ಮತ್ತು ಅವರಿಗೆ ಆರ್ಥಿಕ ಬಲ ನೀಡಲು ಸಹಕಾರಿಯಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆಂಧ್ರಪ್ರದೇಶ ಮಾದರಿಯಲ್ಲೇ ಕರ್ನಾಟಕಕ್ಕೂ ಬೆಂಬಲ ಬೆಲೆಗೆ ಪತ್ರ!: ಬಡ್ಡಿರಹಿತ ಸಾಲದ ಮೊತ್ತ ಹೆಚ್ಚಳವನ್ನು ಸ್ವಾಗತಿಸಿದ ಯದುವೀರ್ ಒಡೆಯರ್, ಕರ್ನಾಟಕದ ತಂಬಾಕು ಬೆಳೆಗಾರರಿಗೂ ನ್ಯಾಯಸಮ್ಮತ ಬೆಂಬಲ ಬೆಲೆ ಸಿಗಬೇಕೆಂದು ಪಟ್ಟು ಹಿಡಿದಿದ್ದಾರೆ.
ಈ ಸಂಬಂಧ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದಿರುವ ಅವರು, “ಆಂಧ್ರಪ್ರದೇಶದ ತಂಬಾಕು ಬೆಳೆಗಾರರಿಗೆ ನೀಡಿರುವ ಮಾನ್ಯತೆಯಂತೆಯೇ ಕರ್ನಾಟಕದ ರೈತರಿಗೂ ನ್ಯಾಯಯುತ ಹಾಗೂ ಲಾಭದಾಯಕ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕು. ನಮ್ಮ ರಾಜ್ಯದ ರೈತರೂ ಸಹ ಸಮಾನ ಮಾನ್ಯತೆ ಮತ್ತು ರಕ್ಷಣೆಗೆ ಸಂಪೂರ್ಣ ಅರ್ಹರಾಗಿದ್ದಾರೆ” ಎಂದು ಒತ್ತಾಯಿಸಿದ್ದಾರೆ.
