ಮೈಸೂರು, ಜನವರಿ 6, 2025 : ಮೈಸೂರಿನ ನ್ಯಾಯಾಲಯದ ಸಂಕೀರ್ಣದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಇ-ಮೇಲ್ ಮೂಲಕ ಬಂದಿದ್ದ ಬೆದರಿಕೆ ಸಂದೇಶವು ತಪಾಸಣೆಯ ನಂತರ ಹುಸಿ ಎಂದು ಸಾಬೀತಾಗಿದೆ. ಬೆದರಿಕೆ ಸಂದೇಶದಿಂದಾಗಿ ಆತಂಕಗೊಂಡಿದ್ದ ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿಗಳು, ಇದು ಸುಳ್ಳು ಎಂಬ ವಿಷಯ ತಿಳಿಯುತ್ತಿದ್ದಂತೆ ನಿರಾಳರಾಗಿದ್ದಾರೆ.

ಪರಿಸ್ಥಿತಿ ತಿಳಿಯಾದ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆಯ ನಂತರ ಪೊಲೀಸರು ನ್ಯಾಯಾಲಯದ ಸಿಬ್ಬಂದಿಗಳಿಗೆ ಒಳಗೆ ಪ್ರವೇಶಿಸಲು ಅನುಮತಿ ನೀಡಿದರು. ಅಲ್ಲದೆ, ಆವರಣದಲ್ಲಿ ನಿಲ್ಲಿಸಲಾಗಿದ್ದ ವಾಹನಗಳನ್ನು ಕೊಂಡೊಯ್ಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಯಿತು. ಪ್ರಸ್ತುತ ಲೋಹಶೋಧಕ ಯಂತ್ರದ ಮೂಲಕ ತಪಾಸಣೆ ನಡೆಸಿ ಪ್ರತಿಯೊಬ್ಬರನ್ನು ಒಳಕ್ಕೆ ಬಿಡಲಾಗುತ್ತಿದೆ.

ಪೊಲೀಸರು ತಪಾಸಣೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ನಡೆಸುತ್ತಿದ್ದು, ಪ್ರತಿಯೊಬ್ಬರ ಬ್ಯಾಗ್‌ಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರವಷ್ಟೇ ಪ್ರವೇಶಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಅಂಚೆ ಇಲಾಖೆಯ ಸಿಬ್ಬಂದಿ ತಂದಿದ್ದ ಪಾರ್ಸೆಲ್ ಚೀಲಗಳನ್ನು ಕೂಡ ಸಂಪೂರ್ಣವಾಗಿ ತಪಾಸಣೆ ನಡೆಸಿದ ಬಳಿಕವೇ ಒಳಗೆ ಕೊಂಡೊಯ್ಯಲು ಅನುಮತಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮೈಸೂರು ನ್ಯಾಯಾಲಯದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಅನ್ನು ಮುಂದುವರಿಸಲಾಗಿದೆ.
