ಮೈಸೂರು , ನವೆಂಬರ್ 13, 2025 : ಹುಣಸೂರು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ತಾಯಿ ಹುಲಿ ಮತ್ತು ಅದರ ಮೂರು ಮರಿಗಳು ಕಾಣಿಸಿಕೊಂಡು ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ನಡೆಸಿದ ತೀವ್ರ ಕಾರ್ಯಾಚರಣೆಯಲ್ಲಿ ಒಂದು ಗಂಡು ಹುಲಿ ಮರಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.
ಹುಣಸೂರು ತಾಲ್ಲೂಕಿನ ಚಿಕ್ಕಾಡಿಗನಹಳ್ಳಿ ಗ್ರಾಮದಲ್ಲಿ ಈ ಹುಲಿ ಮರಿಯನ್ನು ಸೆರೆಹಿಡಿಯಲಾಗಿದೆ. ಇತ್ತೀಚೆಗೆ ಈ ಭಾಗದಲ್ಲಿ ತಾಯಿ ಹುಲಿ ತನ್ನ ಮೂರು ಮರಿಗಳೊಂದಿಗೆ ಕಾಣಿಸಿಕೊಂಡಿತ್ತು. ಹುಲಿಗಳ ಓಡಾಟದಿಂದಾಗಿ ಸ್ಥಳೀಯ ಗ್ರಾಮಸ್ಥರು ಭೀತರಾಗಿದ್ದರು.

ಆತಂಕದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ತಕ್ಷಣವೇ ಕೂಂಬಿಂಗ್ ಕಾರ್ಯಾಚರಣೆಯನ್ನು ಆರಂಭಿಸಿತು. ಆನೆ ಮತ್ತು ಚಿರತೆ ಕಾರ್ಯಪಡೆ (Elephant and Leopard Task Force) ಸದಸ್ಯರು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸೆರೆ ಹಿಡಿದಿರುವ ಒಂದು ಗಂಡು ಹುಲಿ ಮರಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.ಸದ್ಯ, ತಾಯಿ ಹುಲಿ ಮತ್ತು ಉಳಿದ ಎರಡು ಮರಿಗಳಿಗಾಗಿ ಹುಡುಕಾಟ ಮುಂದುವರೆದಿದೆ.
ಹುಲಿ ಮತ್ತು ಅದರ ಮರಿಗಳು ಓಡಾಡುತ್ತಿರುವ ಶಂಕೆ ಇರುವ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಕಾರ್ಯಪಡೆ ಶೋಧ ನಡೆಸುತ್ತಿದೆ. ಪ್ರಮುಖವಾಗಿ ಬಿಳಿಕೆರೆ ಹೋಬಳಿಯ ಚಿಕ್ಕಾಡಿಗನಹಳ್ಳಿ , ಇಲವಾಲ ಹೋಬಳಿಯ ಗ್ರಾಮಗಳು, ದೊಡ್ಡಕಾಡನಹಳ್ಳಿ, ರಟ್ನಳ್ಳಿ, ಹೊಸಕಾಮನಕೊಪ್ಪಲು, ಹಳೇಕಾಮನಕೊಪ್ಪಲು, ಈರಪ್ಪನಕೊಪ್ಪಲು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಹುಲಿ ಮತ್ತು ಮರಿಗಳು ಸಾರ್ವಜನಿಕರಿಗೆ ಯಾವುದೇ ತೊಂದರೆ ನೀಡದಂತೆ ಮತ್ತು ಅವುಗಳನ್ನು ಸುರಕ್ಷಿತವಾಗಿ ಸೆರೆಹಿಡಿಯಲು ಅರಣ್ಯ ಇಲಾಖೆ ಎಲ್ಲಾ ಪ್ರಯತ್ನಗಳನ್ನು ಮುಂದುವರೆಸಿದೆ.
