ನಂಜನಗೂಡು, ಜನವರಿ 20, 2026:ನಂಜನಗೂಡು ತಾಲೂಕಿನ ದೇವಿರಮ್ಮನಹಳ್ಳಿ ಹುಂಡಿ ಬಡಾವಣೆಯಲ್ಲಿ ಚಿರತೆಯೊಂದು ಭೀತಿ ಸೃಷ್ಟಿಸಿದ್ದು, ಮನೆಯ ಮುಂಭಾಗದಲ್ಲಿದ್ದ ಸಾಕು ನಾಯಿಯನ್ನು ಹೊತ್ತೊಯ್ದಿರುವ ಘಟನೆ ತಡರಾತ್ರಿ ನಡೆದಿದೆ.

ನಗರಸಭೆ ಇಂಜಿನಿಯರ್ ಪ್ರತಿಮಾ ಎಂಬುವವರ ಮನೆಯ ಆವರಣಕ್ಕೆ ನುಗ್ಗಿದ ಚಿರತೆಯು, ಅಲ್ಲಿ ಸಾಕಿದ್ದ ನಾಯಿಯನ್ನು ಕಬಳಿಸಿದೆ. ಕಾಡಿನಿಂದ ನಾಡಿಗೆ ಬಂದಿರುವ ಈ ಚಿರತೆಯು ಕಳೆದ ಕೆಲವು ದಿನಗಳಿಂದ ಪಟ್ಟಣದ ವಿವಿಧೆಡೆ ಸಂಚರಿಸುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಸುಮಾರು ರಾತ್ರಿ 2 ಗಂಟೆಯ ವೇಳೆಗೆ ಚಿರತೆಯು ಬಡಾವಣೆಯೊಳಗೆ ಸಂಚರಿಸುತ್ತಿರುವ ದೃಶ್ಯಗಳು ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ. ಜನವಸತಿ ಪ್ರದೇಶದಲ್ಲಿ ಚಿರತೆಯು ಸಲೀಸಾಗಿ ಓಡಾಡುತ್ತಿರುವುದು ಕಂಡು ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ. ಈಗಾಗಲೇ ಹಲವು ಬಾರಿ ಚಿರತೆ ಕಾಣಿಸಿಕೊಂಡಿದ್ದರೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಬೋನು ಇರಿಸುವ ಮೂಲಕ ಚಿರತೆಯನ್ನು ಸೆರೆಹಿಡಿದು ಕಾಡಿಗೆ ಬಿಡಬೇಕು ಎಂದು ಸಾರ್ವಜನಿಕರು ತೀವ್ರವಾಗಿ ಆಗ್ರಹಿಸಿದ್ದಾರೆ.
