ಹುಣಸೂರು, ಮಾರ್ಚ್ 17, 2026 : ತಂದೆಯ ಬಾಕಿ ಸಂಬಳ ಬಿಡುಗಡೆ ಮಾಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ ಅಧಿಕಾರಿಯೊಬ್ಬರು, ಹರಿತವಾದ ಆಯುಧದಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಹೈಡ್ರಾಮಾ ನಡೆದಿದೆ. ಹುಣಸೂರು ತಾಲ್ಲೂಕಿನ ಮುಳ್ಳೂರು ಗ್ರಾಮ ಪಂಚಾಯಿತಿಯ ಪಿಡಿಒ ಮಂಜುಳ ಲೋಕಾಯುಕ್ತರ ಅತಿಥಿಯಾದವರು.
ಈ ಹಿಂದೆ ಇದೇ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ಸ್ವಾಮಿ ಎಂಬುವವರು ಮೃತಪಟ್ಟಿದ್ದರು. ಅವರ ನಿಧನದ ನಂತರ ಅನುಕಂಪದ ಆಧಾರದ ಮೇಲೆ ಅವರ ಪುತ್ರ ಮಹದೇವ್ ಕೆಲಸಕ್ಕೆ ಸೇರಿದ್ದರು. ಸ್ವಾಮಿ ಅವರು ಕರ್ತವ್ಯ ನಿರ್ವಹಿಸಿದ್ದ ಅವಧಿಯ ಎರಡು ವರ್ಷಗಳ ಬಾಕಿ ಸಂಬಳ ಸುಮಾರು 4 ಲಕ್ಷ ರೂಪಾಯಿ ಬಿಡುಗಡೆಯಾಗಬೇಕಿತ್ತು. ಈ ಮೊತ್ತವನ್ನು ಕೊಡಿಸಲು ಪಿಡಿಒ ಮಂಜುಳ 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಲಂಚದ ಮೊತ್ತದಲ್ಲಿ ಮೊದಲ ಕಂತಾಗಿ 25 ಸಾವಿರ ರೂಪಾಯಿಗಳನ್ನು ಕಚೇರಿಯಲ್ಲಿ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಟ್ರ್ಯಾಪ್ ಮಾಡಿದರು. ಈ ವೇಳೆ ಗಾಬರಿಗೊಂಡ ಪಿಡಿಒ ಮಂಜುಳ, ಅಧಿಕಾರಿಗಳ ಮುಂದೆಯೇ ಹರಿತವಾದ ಆಯುಧದಿಂದ ಕೈ ಕೊಯ್ದುಕೊಂಡು ಗಾಯ ಮಾಡಿಕೊಂಡಿದ್ದಾರೆ. ತಕ್ಷಣವೇ ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಚಿಕಿತ್ಸೆಯ ನಂತರ ಈಗ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಯನ್ನು ಮುಂದುವರಿಸಿದ್ದಾರೆ.
