ಶ್ರೀಲಂಕಾ , ಡಿಸೆಂಬರ್ 1, 2025 : ‘ದಿತ್ವಾ’ ಸೈಕ್ಲೋನ್ ತೀವ್ರತೆಗೆ ದ್ವೀಪ ರಾಷ್ಟ್ರ ಶ್ರೀಲಂಕಾ ತತ್ತರಿಸಿಹೋಗಿದೆ. ಭಾರಿ ಮಳೆ ಗಳಿಗೆ ಲಂಕೆ ಶೇಕ್ ಆಗಿದ್ದು, ಜನರು ಕಂಗಾಲಾಗಿದ್ದಾರೆ.
ಶ್ರೀಲಂಕಾದ ತಗ್ಗು ಪ್ರದೇಶಗಳಲ್ಲಿ ಭಾನುವಾರ ಕೂಡ ರಣ ಮಳೆ ಮುಂದುವರಿದಿದ್ದು, ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಮಳೆ ಅವಘಡಗಳಿಂದಾಗಿ ಈವರೆಗೆ 300 ಮಂದಿ ಮೃತಪಟ್ಟಿದ್ದಾರೆ ಎಂದು ಶ್ರೀಲಂಕಾದ ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ.

ವರುಣಾರ್ಭಟಕ್ಕೆ ಸಾವಿರಾರು ಮರಗಳು ಧರೆಗೆ ಉರುಳಿವೆ. ರಸ್ತೆಗಳು ಜಲಾವೃತವಾಗಿ ಸಂಚಾರ ಬಂದ್ ಆಗಿದೆ. ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿ ಮರಗಳನ್ನು ತೆರವುಗೊಳಿಸುವಲ್ಲಿ ನಿರತರಾಗಿದ್ದಾರೆ. ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ.
2.73 ಲಕ್ಷ ಕುಟುಂಬಗಳ 10 ಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರಿ ಮಳೆಯಿಂದಾಗಿ 20,000 ಮನೆಗಳಿಗೆ ಹಾನಿಯಾಗಿದೆ. 1.22 ಲಕ್ಷ ಜನರು ತಾತ್ಕಾಲಿಕ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಉಳೆದ 8.33 ಲಕ್ಷ ಮಂದಿಗೆ ನೆರವಿನ ಅಗತ್ಯವಿದೆ ಎಂದು ಡಿಎಂಸಿ ಹೇಳಿದೆ.
ಸಾವಿರಾರು ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯ ಸಿಬ್ಬಂದಿಯನ್ನು ಪೀಡಿತ ಜಾಗಗಳಲ್ಲಿ ಸಹಾಯ ಮಾಡಲು ನಿಯೋಜಿಸಲಾಗಿದೆ. ಮುಂದಿನ ಮೂರು ದಿನ ಮಳೆ ಹೆಚ್ಚಾಗುವ ಬಗ್ಗೆ ಹವಾಮಾನ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
