ಬಾಗಲಕೋಟೆ , ನವೆಂಬರ್ 5, 2025 :ಬಾಗಲಕೋಟೆ ಕ್ಷೇತ್ರದ ಹಾಲಿ ಶಾಸಕ ಹೆಚ್.ವೈ. ಮೇಟಿ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಅವರ ಹುಟ್ಟೂರಾದ ಬಾಗಲಕೋಟೆ ಜಿಲ್ಲೆಯ ತಿಮ್ಮಾಪುರದಲ್ಲಿ ಇವತ್ತು ಬುಧವಾರ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಪಕ್ಷದ ಪ್ರಮುಖರು ಈ ವೇಳೆ ಭಾಗಿಯಾಗಲಿದ್ದು, ಸಾರ್ವಜನಿಕರ ಅಂತಿಮ ದರ್ಶನ ಮುಗಿದ ಬಳಿಕ ಸಣ್ಣ ಮೆರವಣಿಗೆ ನಡೆಸಿ ಅಂತ್ಯಕ್ರಿಯೆ ನಡೆಸಲಾಗುತ್ತದೆ.
ತೀವ್ರ ಅನಾರೋಗ್ಯದ ಕಾರಣ ಕೆಲ ದಿನಗಳಿಂದ ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಹೆಚ್.ವೈ.ಮೇಟಿ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮೃತಪಟ್ಟಿದ್ದಾರೆ. ವಿವಿಧ ಪಕ್ಷದ ಗಣ್ಯರು ಮೇಟಿ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.
ಹೆಚ್ ವೈ ಮೇಟಿ ಹಿನ್ನೆಲೆ..!
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ H.Y. ಮೇಟಿ ಜಿಲ್ಲೆಯ ತಿಮ್ಮಾಪುರದಲ್ಲಿ 1946 ಅಕ್ಟೋಬರ್ 9ರಂದು ಜನಿಸಿದ್ದರು. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಬಾಗಲಕೋಟೆ ಡಿಸಿಸಿ ಬ್ಯಾಂಕ್ ನಿರ್ದೇಶಕರೂ ಆಗಿದ್ದ H.Y.ಮೇಟಿ, 1989ರಲ್ಲಿ ಗುಳೇದಗುಡ್ಡ ಕ್ಷೇತ್ರದಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
1994ರಲ್ಲಿ ಗುಳೇದಗುಡ್ಡದಲ್ಲಿ ಜೆಡಿಎಸ್ನಿಂದ 2ನೇ ಬಾರಿ ಗೆಲುವು ಸಾಧಿಸಿ ದೇವೇಗೌಡರ ಸಂಪುಟದಲ್ಲಿ ಅರಣ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ನಂತರ 1996ರಲ್ಲಿ ಬಾಗಲಕೋಟೆ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದು, 2004ರಲ್ಲಿ ಮತ್ತೆ ಗುಳೇದಗುಡ್ಡ ಕ್ಷೇತ್ರದಿಂದ ಗೆದ್ದಿದ್ದರು. ಸುದೀರ್ಘ 35ವರ್ಷಗಳ ರಾಜಕೀಯ ಜೀವನದ ನಂತರ ಬದುಕಿನ ಪ್ರಯಾಣ ಮುಗಿಸಿ ಮೇಟಿ ಇಹಲೋಕ ತ್ಯಜಿಸಿದ್ದಾರೆ.
