ಮೈಸೂರು, ಜನವರಿ 7, 2026 : ಮೈಸೂರು ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ನಿನ್ನೆ ಕಾಣಿಸಿಕೊಂಡಿದ್ದ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯು ಇಂದು ಬೆಳ್ಳಂಬೆಳಿಗ್ಗೆಯಿಂದಲೇ ಬೃಹತ್ ಕಾರ್ಯಾಚರಣೆಯನ್ನು ಆರಂಭಿಸಿದೆ. ಸಾರ್ವಜನಿಕರಲ್ಲಿ ಮನೆ ಮಾಡಿರುವ ಆತಂಕವನ್ನು ದೂರ ಮಾಡಲು ಇಲಾಖೆಯು ಸಕಲ ಸಿದ್ಧತೆಗಳೊಂದಿಗೆ ಕಣಕ್ಕಿಳಿದಿದೆ.
ಹುಲಿ ಪತ್ತೆ ಹಚ್ಚಲು ಕೊಡಗಿನ ದುಬಾರೆ ಆನೆ ಶಿಬಿರದಿಂದ ವಿಶೇಷ ತರಬೇತಿ ಪಡೆದ ಪ್ರಶಾಂತ್, ರಂಜನ್, ಹರ್ಷ ಹಾಗೂ ಸುಗ್ರೀವ ಎಂಬ ನಾಲ್ಕು ಆನೆಗಳನ್ನು ಕರೆತರಲಾಗಿದೆ. ಈ ಕಾರ್ಯಾಚರಣೆಯು ಡಿಸಿಎಫ್ (DCF) ಪರಮೇಶ್ ಹಾಗೂ ಆರ್‌ಎಫ್‌ಒ (RFO) ಸಂತೋಷ್ ಉಗಾರ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಅರಣ್ಯ ಇಲಾಖೆಯ ನುರಿತ ಸಿಬ್ಬಂದಿ, ಶೂಟರ್‌ಗಳು ಮತ್ತು ಪಶುವೈದ್ಯರ ತಂಡವು ಸ್ಥಳದಲ್ಲಿದ್ದು, ಹುಲಿ ಸಂಚರಿಸುವ ಸಾಧ್ಯತೆ ಇರುವ ಪೊದೆ ಹಾಗೂ ತೋಟದ ಪ್ರದೇಶಗಳಲ್ಲಿ ತೀವ್ರ ಶೋಧ ನಡೆಸುತ್ತಿದೆ.
ಮೈಸೂರು ವಿಮಾನ ನಿಲ್ದಾಣದ ಸಮೀಪವಿರುವ ಜಮೀನುಗಳಲ್ಲಿ ನಿನ್ನೆ ಹುಲಿ ಕಾಣಿಸಿಕೊಂಡಿದ್ದರಿಂದ ಸ್ಥಳೀಯ ನಿವಾಸಿಗಳು ಮತ್ತು ರೈತರು ತೀವ್ರ ಭೀತಿಗೊಳಗಾಗಿದ್ದರು. ವಿಮಾನ ನಿಲ್ದಾಣದಂತಹ ಸೂಕ್ಷ್ಮ ಪ್ರದೇಶದ ಬಳಿಯೇ ಹುಲಿ ಇರುವುದರಿಂದ ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಕೂಡಲೇ ಕಾರ್ಯಾಚರಣೆಗೆ ಚಾಲನೆ ನೀಡಿದೆ. ಜನರು ಆತಂಕಪಡುವ ಅಗತ್ಯವಿಲ್ಲ, ಹುಲಿಯನ್ನು ಸೆರೆಹಿಡಿಯಲು ಎಲ್ಲಾ ರೀತಿಯ ತಾಂತ್ರಿಕ ಮತ್ತು ಪ್ರಾಯೋಗಿಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆನೆಗಳ ಸಹಾಯದಿಂದ ದಟ್ಟವಾದ ಪೊದೆಗಳನ್ನು ಪರಿಶೀಲಿಸಲಾಗುತ್ತಿದೆ.
ಸದ್ಯ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ವಿಮಾನ ನಿಲ್ದಾಣದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆಯಾಗಿ ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಸೂಚಿಸಲಾಗಿದೆ.
