ಪಿರಿಯಾಪಟ್ಟಣ, ಮಾರ್ಚ್ 3, 2026 : ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ ಸುದ್ದಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಖಮೇನಿ ಅವರ ನಿಧನದ ಹಿನ್ನೆಲೆಯಲ್ಲಿ ಇಲ್ಲಿನ ಶಿಯಾ ಮುಸ್ಲಿಂ ಸಮುದಾಯದವರು ಬೃಹತ್ ಪ್ರತಿಭಟನೆ ನಡೆಸುವ ಮೂಲಕ ತಮ್ಮ ಶೋಕ ಮತ್ತು ಪ್ರತಿರೋಧವನ್ನು ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ನೀರವ ಮೌನ ಮನೆಮಾಡಿದ್ದು, ಸಮುದಾಯದ ಮುಖಂಡರು ಹಾಗೂ ಯುವಕರು ಕಪ್ಪು ಉಡುಗೆ ಧರಿಸಿ, ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಮೌನ ಮೆರವಣಿಗೆ ನಡೆಸಿದರು. ಖಮೇನಿ ಅವರ ಭಾವಚಿತ್ರಗಳನ್ನು ಹಿಡಿದ ಪ್ರತಿಭಟನಾಕಾರರು ಮೇಣದಬತ್ತಿ ಬೆಳಗುವ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಖಮೇನಿ ಅವರ ಸಾವಿನ ಸುದ್ದಿಯಿಂದ ಭಾವುಕರಾದ ಅನೇಕರು ಕಣ್ಣೀರು ಹಾಕುತ್ತಿದ್ದ ದೃಶ್ಯಗಳು ಕಂಡುಬಂದವು.
ಇದೇ ವೇಳೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ನೀತಿಯ ವಿರುದ್ಧ ಪ್ರತಿಭಟನಾಕಾರರು ತೀವ್ರ ಆಕ್ರೋಶ ಹೊರಹಾಕಿದರು. ಅಮೆರಿಕ ಒಂದು ಕಡೆ ಶಾಂತಿ ಮಂತ್ರ ಜಪಿಸುತ್ತಾ, ಮತ್ತೊಂದೆಡೆ ದ್ವಂದ್ವ ನೀತಿಯ ಮೂಲಕ ಯುದ್ಧವನ್ನು ಪ್ರಚೋದಿಸುತ್ತಿದೆ ಎಂದು ಕಿಡಿಕಾರಿದರು. ಈ ಅನಗತ್ಯ ಯುದ್ಧದ ಅನಿವಾರ್ಯತೆ ಇರಲಿಲ್ಲ ಎಂದು ಅಭಿಪ್ರಾಯಪಟ್ಟ ಮುಖಂಡರು, ಅನ್ಯಾಯದ ವಿರುದ್ಧ ತಮ್ಮ ಹೋರಾಟ ಮುಂದಿನ ದಿನಗಳಲ್ಲೂ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದಾರೆ.
