ಬೆಂಗಳೂರು, ನವೆಂಬರ್ 7, 2025 : ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆ ಮತ್ತು ಸುಸ್ಥಿರ ಬೆಳವಣಿಗೆಯ ಉದ್ದೇಶದಿಂದ ಆಗಸ್ಟ್ 2024 ರಲ್ಲಿ ರಚಿಸಲಾಗಿದ್ದ ಸಂಪನ್ಮೂಲ ಕ್ರೋಢೀಕರಣ ಸಮಿತಿಯು ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತನ್ನ ಅಂತಿಮ ವರದಿಯನ್ನು ಸಲ್ಲಿಸಿದೆ.
ವರದಿಯ ಪ್ರಮುಖಾಂಶಗಳು ಇಂತಿದೆ :
- ಬಳಕೆದಾರರ ಶುಲ್ಕಗಳ ತರ್ಕಬದ್ಧಗೊಳಿಸುವಿಕೆ: ಸಾರ್ವಜನಿಕ ಸೇವೆಗಳ ಬಳಕೆದಾರರ ಶುಲ್ಕಗಳನ್ನು ತರ್ಕಬದ್ಧಗೊಳಿಸಬೇಕು, ಸೇವೆಗೆ ಅನುಗುಣವಾಗಿ ಶುಲ್ಕ ವಿಧಿಸಲು ‘ಪ್ರಮಾಣಾತ್ಮಕ ಬಿಲ್ಲಿಂಗ್ ವ್ಯವಸ್ಥೆ’ (Quantitative Billing System) ಜಾರಿಗೊಳಿಸಬೇಕು ಮತ್ತು ಹಣದುಬ್ಬರಕ್ಕೆ ಅನುಗುಣವಾಗಿ ಶುಲ್ಕಗಳನ್ನು ಸ್ವಯಂಚಾಲಿತವಾಗಿ ಪರಿಷ್ಕರಿಸುವ ವ್ಯವಸ್ಥೆ ಜಾರಿಗೆ ತರಬೇಕು.
- ಆದಾಯ ಮೂಲಗಳ ವೈವಿಧ್ಯೀಕರಣ: ಕರ್ನಾಟಕವು ಅತ್ಯುತ್ತಮ ಆರ್ಥಿಕ ಬೆಳವಣಿಗೆ ಹೊಂದಿದ್ದರೂ, ಸ್ವಂತ ತೆರಿಗೆ ರಾಜಸ್ವದ (ವಾಣಿಜ್ಯ ತೆರಿಗೆ, ಅಬಕಾರಿ, ನೋಂದಣಿ ಮತ್ತು ಮೋಟಾರು ವಾಹನ ತೆರಿಗೆ) ಮೇಲೆ ಹೆಚ್ಚು ಅವಲಂಬಿತವಾಗಿದೆ. ತೆರಿಗೆಯೇತರ ಆದಾಯ, ವಿಶೇಷವಾಗಿ ಬಳಕೆದಾರರ ಶುಲ್ಕಗಳು ಮತ್ತು ಸರ್ಕಾರಿ ಆಸ್ತಿಗಳಿಂದ ಬರುವ ಆದಾಯ ಹೆಚ್ಚಿಸಲು ವಿಪುಲ ಅವಕಾಶಗಳಿದ್ದು, ಅವುಗಳನ್ನು ಗುತ್ತಿಗೆ ಮತ್ತು ನಗದೀಕರಣದ ಮೂಲಕ ಬಳಸಿಕೊಳ್ಳಬೇಕು.
- ಆಡಳಿತಾತ್ಮಕ ಸುಧಾರಣೆಗಳು: ಆಸ್ತಿ ದತ್ತಾಂಶಗಳ ಉತ್ತಮ ನಿರ್ವಹಣೆ, ಸರ್ಕಾರಿ ಆಸ್ತಿಗಳ ಸಮೀಕ್ಷೆ, ಸ್ಥಳೀಯ ಸಂಸ್ಥೆಗಳ ಆದಾಯ ಹೆಚ್ಚಿಸಲು ಮಾರ್ಗಸೂಚಿ ದರಗಳು ಮತ್ತು ಆಸ್ತಿ ತೆರಿಗೆ ಪರಿಷ್ಕರಣೆ, ಮತ್ತು ಅಬಕಾರಿ ಇಲಾಖೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಹರಾಜು ಆಧಾರಿತ ಡಿಜಿಟಲ್ ಸನ್ನದು ನೀಡುವುದು ಅಗತ್ಯ.
- ಆರ್ಥಿಕ ನೀತಿ ವಿಭಾಗ ಸ್ಥಾಪನೆ: ತೆರಿಗೆಯೇತರ ಆದಾಯ ಮತ್ತು ಆಸ್ತಿ ನಗದೀಕರಣವನ್ನು ಮೇಲ್ವಿಚಾರಣೆ ಮಾಡಲು ಆರ್ಥಿಕ ಇಲಾಖೆಯಲ್ಲಿ ‘ಆರ್ಥಿಕ ನೀತಿ ವಿಭಾಗ’ (Economic Policy Division) ಸ್ಥಾಪಿಸುವ ಶಿಫಾರಸು ಮಾಡಲಾಗಿದೆ.
- ವೆಚ್ಚ ನಿರ್ವಹಣೆ: ಮೂಲಸೌಕರ್ಯ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಂತಹ ಪ್ರಗತಿ ಉತ್ತೇಜಕ ಕ್ಷೇತ್ರಗಳಿಗೆ ಆದ್ಯತೆ ನೀಡಿ ಅನುದಾನ ಮೀಸಲಿಡುವ ಹಾಗೂ ಪರಿಣಾಮಕಾರಿ ವೆಚ್ಚ ನಿರ್ವಹಣೆಯ ಅಗತ್ಯವನ್ನು ವರದಿ ಒತ್ತಿಹೇಳಿದೆ.
ಸಮಗ್ರ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆ ಸಾಧಿಸಲು ರಾಜ್ಯದ ರಾಜಸ್ವ ಸಂಗ್ರಹಣೆಯಲ್ಲಿ ವ್ಯವಸ್ಥಿತ ಸುಧಾರಣೆಗಳು ಅತ್ಯಗತ್ಯ ಎಂದು ಸಮಿತಿ ಸ್ಪಷ್ಟಪಡಿಸಿದೆ.
