ಮೈಸೂರು, ನವೆಂಬರ್ 22, 2025: ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಕುಂಠಿತಗೊಂಡಿದ್ದು, ಇದಕ್ಕೆ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ‘ಪವರ್ ಶೇರಿಂಗ್’ ಚರ್ಚೆಗಳೇ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದಿನನಿತ್ಯ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇದರಿಂದಾಗಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಈ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಧ್ಯ ಪ್ರವೇಶಿಸಬೇಕು ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ವಿಶ್ವನಾಥ್ ಆಗ್ರಹಿಸಿದ್ದಾರೆ.
ಕಾಂಗ್ರೆಸ್‌ನ್ನೇ ಮುಗಿಸಲು ಮುಂದಾದ ಸಿದ್ದರಾಮಯ್ಯ?
ಜೆಡಿಎಸ್‌ನಿಂದ ಸಿದ್ದರಾಮಯ್ಯ ಅವರನ್ನು ಹೊರಹಾಕಿದಾಗ ಆಶ್ರಯ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಆದರೆ ಈಗ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಾರ್ಟಿಯನ್ನೇ ಮುಗಿಸಲು ಮುಂದಾಗಿದ್ದಾರೆ ಎಂದು ವಿಶ್ವನಾಥ್ ಗಂಭೀರ ಆರೋಪ ಮಾಡಿದರು.
ಈ ರಾಜ್ಯದಲ್ಲಿ ವಚನ ಭ್ರಷ್ಟರಾದವರು ಯಾರು ಕೂಡ ಉಳಿದಿಲ್ಲ, ಎಂದು ಅವರು “ಧರಣಿ ಮಂಡಲ ಮಧ್ಯದೊಳಗೆ” ಪದ್ಯವನ್ನು ಉಲ್ಲೇಖಿಸಿ ಟೀಕಿಸಿದರು. ವ್ಯಾಘ್ರಕ್ಕೆ ಮಾತು ಕೊಟ್ಟು ಹಸು ನುಡಿದಂತೆ ನಡೆದುಕೊಂಡ ನಾಡು ನಮ್ಮದು. ಕುರುಬರು ಕೊಟ್ಟ ಮಾತಿಗೆ ತಪ್ಪಿ ನಡೆದಿಲ್ಲ,ಎಂದು ಹೇಳಿದ ಅವರು, ಸಿದ್ದರಾಮಯ್ಯ ಅವರು ಕುರುಬ ಸಮಾಜದ ಹೆಸರನ್ನು ಕೂಡ ಹಾಳು ಮಾಡುತ್ತಿದ್ದಾರೆ, ಎಂದು ಆಕ್ರೋಶ ವ್ಯಕ್ತಪಡಿಸಿದರು. ಕುರುಬರಿಗೆ ಏನನ್ನೂ ಮಾಡದ ಸಿದ್ದರಾಮಯ್ಯ ಎಲ್ಲಾ ಮಾಡಿದ್ದು ನಾನೇ ಎನ್ನುತ್ತಿರುವುದು ದುರಹಂಕಾರ, ಎಂದು ಅವರು ಖಂಡಿಸಿದರು.
ರಾಜ್ಯ ಸಾಲದ ಕೂಪಕ್ಕೆ, ರಸ್ತೆಗಳು ಗುಂಡಿಮಯ
ಪ್ರಧಾನಿ ಮೋದಿಯವರು 5 ಕೆಜಿ ಅಕ್ಕಿ ಕೊಡುತ್ತಿದ್ದಾರೆ, ಆದರೆ ಸಿದ್ದರಾಮಯ್ಯ ಅವರು ಬರೀ “ಬೊಗಳೆ ಹೊಡೆದುಕೊಂಡು ಓಡಾಡುತ್ತಿದ್ದಾರೆ” ಎಂದು ವಿಶ್ವನಾಥ್ ತೀವ್ರವಾಗಿ ಟೀಕಿಸಿದರು.ಸಿದ್ದರಾಮಯ್ಯ ಅವರು ಅತಿ ಹೆಚ್ಚು ಸಾಲ ಮಾಡುವ ಮೂಲಕ ರಾಜ್ಯವನ್ನು ಸಾಲದ ಕೂಪಕ್ಕೆ ದೂಡಿದ್ದಾರೆ. ಸಾಲ ತೆಗೆದುಕೊಂಡು ಬಂದು ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುತ್ತಿದ್ದಾರೆ. ಹಣಕಾಸಿನ ಮಂತ್ರಿಯಾಗಿರುವ ಅವರಿಗೆ ಹಣದ ಬೆಲೆ ಗೊತ್ತಿಲ್ಲ ಎಂದು ದೂರಿದರು.ರಾಜ್ಯದಾದ್ಯಂತ ರಸ್ತೆಗಳು ಗುಂಡಿ ಬಿದ್ದು ಹೋಗಿವೆ. ಗುಂಡಿ ಬಿದ್ದು ಹೋಗಿರುವ ರಾಜ್ಯದ ಭಂಡ ನಾಯಕ ಸಿದ್ದರಾಮಯ್ಯ, ಎಂದು ಟೀಕಾ ಪ್ರಹಾರ ನಡೆಸಿದರು.
ಮದ್ಯದ ಬೆಲೆ ಏರಿಕೆ: ಯುವ ಸಮುದಾಯ ಗಾಂಜಾ ಸೇವನೆಗೆ ಮೊರೆ
ಮದ್ಯದ ಬೆಲೆ ಏರಿಕೆಯಿಂದಾಗಿ ಯುವ ಸಮುದಾಯ ಹಾಳಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ವಿಶ್ವನಾಥ್, ಮದ್ಯದ ಬೆಲೆ ದುಬಾರಿಯಾಗಿರುವುದರಿಂದ ಯುವಕರು ಗಾಂಜಾ ಸೇವನೆಯ ಮೊರೆ ಹೋಗುತ್ತಿದ್ದಾರೆ ಎಂದು ಹೇಳಿದರು.
ಅಧಿಕಾರ ಹಂಚಿಕೆ ಆಣೆ-ಪ್ರಮಾಣ: ಮೌನವೇಕೆ?
ಸಿಎಂ ಸಿದ್ದರಾಮಯ್ಯ ಅವರು ಅಧಿಕಾರ ಹಂಚಿಕೆ ವಿಚಾರದಲ್ಲಿ ಐಎಸಿಸಿ ಅಧ್ಯಕ್ಷರ ಸಮಕ್ಷಮದಲ್ಲಿ ಆಣೆ ಪ್ರಮಾಣ ಮಾಡಿದ್ದಾರೆ. ಆ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಸಹೋದರರ ಸಮ್ಮುಖದಲ್ಲಿ ಕಾಂಗ್ರೆಸ್‌ನ ಕೆಲ ಹಿರಿಯ ನಾಯಕರು ಉಪಸ್ಥಿತರಿದ್ದರು. ಆದರೆ ಈ ಬಗ್ಗೆ ಯಾರೊಬ್ಬರೂ ಈಗ ಬಾಯಿ ಬಿಡುತ್ತಿಲ್ಲ ಎಂದು ವಿಶ್ವನಾಥ್ ಬಹಿರಂಗಪಡಿಸಿದರು. ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಾರ್ಟಿ ಧೂಳೀಪಟವಾಗಲಿದೆ, ಎಂದು ಎಚ್ಚರಿಕೆ ನೀಡಿದರು.
