ಕೆ.ಆರ್. ನಗರ: ತಾಲ್ಲೂಕು ಆಡಳಿತದ ಮಂದಗತಿಯ ಕಾರ್ಯವೈಖರಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ರೈತರೊಬ್ಬರು ತಾಲ್ಲೂಕು ಕಚೇರಿಯ ಮುಂಭಾಗ ನಿದ್ರೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದ್ದಾರೆ. ತಾಲ್ಲೂಕಿನ ಅರ್ಜುನಹಳ್ಳಿ ಗ್ರಾಮದ ರೈತ ರಾಮಪ್ರಸಾದ್ ಈ ವಿಭಿನ್ನ ಪ್ರತಿಭಟನೆ ನಡೆಸಿದವರು.

ತಾಲ್ಲೂಕು ಕಚೇರಿಯ ಆವರಣದಲ್ಲಿ ಚಾಪೆ ಮತ್ತು ದಿಂಬು ಹಾಸಿ, ರಗ್ಗು ಹೊದ್ದುಕೊಂಡು ಮಲಗುವ ಮೂಲಕ ರಾಮಪ್ರಸಾದ್ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ಸಾರ್ವಜನಿಕರ ಮತ್ತು ರೈತರ ಕೆಲಸಗಳನ್ನು ಮಾಡುವಲ್ಲಿ ಅಧಿಕಾರಿಗಳು ನಿದ್ರೆ ಮಾಡುತ್ತಿದ್ದಾರೆ ಎನ್ನುವುದನ್ನು ಸಂಕೇತಿಸಲು ಅವರು ಈ ಮಾರ್ಗವನ್ನು ಆರಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲ್ಲೂಕು ಆಡಳಿತವು ರೈತರಿಗೆ ಮತ್ತು ಸಾರ್ವಜನಿಕರಿಗೆ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಸಣ್ಣಪುಟ್ಟ ಕೆಲಸಗಳಿಗೂ ಹತ್ತಾರು ಬಾರಿ ಕಚೇರಿಗೆ ಅಲೆದಾಡಿಸಿದರೂ ಅಧಿಕಾರಿಗಳು ಮಾತ್ರ ಕಷ್ಟ ಕೇಳುತ್ತಿಲ್ಲ. ಜನರ ಕೆಲಸ ಮಾಡಲು ಹಿಂದೇಟು ಹಾಕುತ್ತಾ ಸಾರ್ವಜನಿಕರನ್ನು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು. ಅಧಿಕಾರಿಗಳ ಈ ಉಡಾಫೆ ಧೋರಣೆಯಿಂದ ಬೇಸತ್ತು ತಾವು ಈ ರೀತಿ ಪ್ರತಿಭಟಿಸುತ್ತಿರುವುದಾಗಿ ತಿಳಿಸಿದ ಅವರು, ತಾಲ್ಲೂಕು ಆಡಳಿತದ ವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
