ಮೈಸೂರು, ನವೆಂಬರ್ 4, 2025 : ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಮಾತನಾಡಿದ ಖ್ಯಾತ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರು, ನಟ ದರ್ಶನ್ ಅವರ ಹೆಸರು ಹೇಳದೆ ತೀವ್ರ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಸ್ಟಾರ್ ನಟರ ಹುಟ್ಟಿಗೆ ನಿರ್ಮಾಪಕರು ಮತ್ತು ನಿರ್ದೇಶಕರ ಪಾತ್ರ ಮಹತ್ವದ್ದು ಎಂಬುದನ್ನು ಅವರು ಪ್ರತಿಪಾದಿಸಿದರು.

ಒಬ್ಬರು ಇತ್ತೀಚೆಗೆ ಹೇಳಿದರು, ‘ನಿರ್ಮಾಪಕರು ಇದ್ದರೆ ಸ್ಟಾರ್ ಆಗಲ್ಲ, ಸಿನಿಮಾ ಆಗುತ್ತೆ’ ಅಂತಾ. ಆದರೆ, ಒಂದು ಸಿನಿಮಾಗೆ ದೊಡ್ಡ ಸ್ಟಾರ್ ಅಂದರೆ ಅದು ನಿರ್ಮಾಪಕರು ಹಾಗೂ ನಿರ್ದೇಶಕರು, ಎಂದು ಉಮಾಪತಿ ಅವರು ನೇರವಾಗಿ ದರ್ಶನ್ ಅವರ ಹೇಳಿಕೆಗೆ ತಿರುಗೇಟು ನೀಡಿದರು. ನಿರ್ಮಾಪಕರು, ನಿರ್ದೇಶಕರು ಹಾಗೂ ಜನರು ಸ್ಟಾರ್‌ಗಳನ್ನು ಮಾಡುತ್ತಾರೆ. ನಿರ್ಮಾಪಕರು, ನಿರ್ದೇಶಕರು ಸೇರಿದಾಗ ಮಾತ್ರ ಸ್ಟಾರ್‌ನ್ನು ಹುಟ್ಟುಹಾಕಬಹುದು, ಎಂದು ಸ್ಪಷ್ಟಪಡಿಸಿದರು.
ಸಿನಿಮಾ ಸ್ಟಾರ್ ಆದ ಮೇಲೆ, ಅವರಿಗೆ ಅನ್ನದಾತರು ಬೇಕಾದಷ್ಟು ಜನರು ಆಗಿಬಿಡುತ್ತಾರೆ. ಆಮೇಲೆ ನಿರ್ಮಾಪಕರನ್ನು ಬಿಟ್ಟು ಫ್ಯಾನ್ ಕ್ಲಬ್‌ಗಳನ್ನು ಕಟ್ಟಿಕೊಳ್ಳುತ್ತಾರೆ ಎಂದು ಟೀಕಿಸಿದರು. ಒಂದಷ್ಟು ಕ್ಯಾಂಪೇನ್‌ಗಳಿಗೆ ಕರೆದುಕೊಂಡು ಹೋಗಿ ಅನ್ನ ಹಾಕಿದರೆ, ಅವರನ್ನು ಅನ್ನದಾತರು ಅಂತಾರೆ. ಆದರೆ, ಪ್ರತಿ ನಿತ್ಯ ಅನ್ನ ಕೊಡುವವರು ಅನ್ನದಾತರು. ವರ್ಷಕ್ಕೆ ಒಂದು ಬಾರಿ ಅನ್ನ ಹಾಕುವವರು ಯಾವತ್ತೂ ಅನ್ನದಾತರು ಆಗಲು ಸಾಧ್ಯವಿಲ್ಲ ಎಂದು ತೀಕ್ಷ್ಣವಾಗಿ ನುಡಿದರು.
ವೇದ ಸುಳ್ಳಾದರೂ ಗಾದೆ ಸುಳ್ಳಾಗಲ್ಲ. ಒಪ್ಪೊತ್ತಿನ ಕೂಳನ್ನು ನಂಬಿಕೊಂಡು ವರ್ಷದ ಕೂಳನ್ನು ಕಳೆದುಕೊಂಡ್ರು ಎಂಬ ನಿದರ್ಶನ ನಿಮ್ಮ ಮುಂದೆ ಇದೆ ಎಂದರು.ನಾನು ಯಾರ ಬಳಿಯಾದರೂ ಸಹಾಯ ತೆಗೆದುಕೊಂಡರೆ ಹತ್ತು ಜನದ ಮುಂದೆ ಹೇಳುತ್ತೇನೆ. ಸಹಾಯ ಮಾಡಿದವರನ್ನು ಸಾಯುವವರೆಗೆ ನೆನಪು ಮಾಡಿಕೊಳ್ಳುತ್ತೇನೆ. ಕೃತಜ್ಞತೆಯನ್ನು ಮರೆತರೆ ಜೀವನಕ್ಕೆ ಅರ್ಥವೇ ಇರುವುದಿಲ್ಲ ಎಂದು ಕೃತಜ್ಞತಾಭಾವದ ಮಹತ್ವವನ್ನು ಹೇಳಿದರು.
ಇಬ್ಬರು ಹೀರೋಗಳ ಜೊತೆ ಸಿನಿಮಾ
ಸದ್ಯದಲ್ಲೇ ಇಬ್ಬರು ಹೀರೋಗಳ ಜೊತೆ ಸಿನಿಮಾ ಮಾಡುತ್ತೇನೆ ಎಂದು ತಿಳಿಸಿದ ಉಮಾಪತಿ, ತಾವು ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ಯಾನ್ ಇಂಡಿಯಾ ಮಾಡಲು ಹೋದವರು ಜೇಬು ಖಾಲಿ ಮಾಡಿಕೊಂಡು ಬಂದಿದ್ದಾರೆ. ಎಷ್ಟೇ ಆದರೂ ಹಳೇ ಹೆಂಡತಿಯ ಪಾದವೇ ಗತಿ ಎಂಬಂತೆ ನಮಗೆ ಕರ್ನಾಟಕದ ಜನರೇ ಗಟ್ಟಿ, ಎಂದು ರಾಜ್ಯ ಪ್ರೇಕ್ಷಕರ ಮಹತ್ವವನ್ನು ತಿಳಿಸಿದರು.
