ಮೈಸೂರು, ಜನವರಿ 22, 2026 : ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ನಡೆದ ಗದ್ದಲದ ಕುರಿತು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಜಂಟಿ ಅಧಿವೇಶನಕ್ಕಾಗಿ ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವು ಕೇಂದ್ರ ಸರ್ಕಾರದ ವಿರುದ್ಧದ ದ್ವೇಷದಿಂದ ಕೂಡಿತ್ತು ಎಂದು ಆರೋಪಿಸಿದ ಅವರು, ಅಧಿವೇಶನದ ವೇಳೆ ಬಿ.ಕೆ. ಹರಿಪ್ರಸಾದ್ ಹಾಗೂ ಕಾಂಗ್ರೆಸ್ ಶಾಸಕರು ರಾಜ್ಯಪಾಲರ ಹಾದಿ ತಡೆದು ಹಲ್ಲೆಗೆ ಮುಂದಾದಂತೆ ವರ್ತಿಸಿದ್ದಾರೆ ಎಂದು ಕಿಡಿಕಾರಿದರು.
ಸದನದಲ್ಲಿ ಮಾರ್ಷಲ್‌ಗಳು ಇಲ್ಲದಿದ್ದರೆ ಕಾಂಗ್ರೆಸ್ ಶಾಸಕರು ರಾಜ್ಯಪಾಲರ ಮೇಲೆ ಹಲ್ಲೆ ನಡೆಸುತ್ತಿದ್ದರು ಎಂಬ ಆತಂಕ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್‌ನ ಈ “ಗೂಂಡಾ ವರ್ತನೆ”ಯಿಂದ ಇಡೀ ರಾಜ್ಯವೇ ತಲೆತಗ್ಗಿಸುವಂತಾಗಿದೆ ಎಂದರು.
ಕಾನೂನು ಪದವೀಧರರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಎಲ್ಲಾ ಘಟನೆಗಳನ್ನು ಮೌನವಾಗಿ ವೀಕ್ಷಿಸುತ್ತಿರುವುದನ್ನು ಪ್ರಶ್ನಿಸಿದ ಸಿಂಹ, ಈ ಹಿಂದೆ ಹಂಸರಾಜ್ ಭಾರದ್ವಾಜ್ ರಾಜ್ಯಪಾಲರಾಗಿದ್ದಾಗಲೂ ಇದೇ ರೀತಿಯ ಸಂದರ್ಭ ಎದುರಾಗಿತ್ತು, ಆದರೆ ಅಂದು ಬಿಜೆಪಿ ಇಂತಹ ವರ್ತನೆ ತೋರಿರಲಿಲ್ಲ ಎಂದು ನೆನಪಿಸಿದರು. ಕೇಂದ್ರ ಸರ್ಕಾರವನ್ನು ಟೀಕಿಸುವುದಕ್ಕಾಗಿಯೇ ಈ ಅಧಿವೇಶನ ಕರೆದಂತಿದೆ ಎಂದು ದೂರಿದ ಅವರು, ನರೇಗಾ ಯೋಜನೆಯ ಲೋಪದೋಷಗಳನ್ನು ಸರಿಪಡಿಸಿರುವ ಕೇಂದ್ರದ ಕ್ರಮವನ್ನು ಸಮರ್ಥಿಸಿಕೊಂಡರು. ರಾಜ್ಯ ಸರ್ಕಾರವು ತನ್ನ ಪಾಲಿನ ಶೇ. 40ರಷ್ಟು ಹಣವನ್ನು ನೀಡಲಾಗದೆ “ಭಿಕಾರಿ ಸರ್ಕಾರ” ನಡೆಸುತ್ತಿದೆ ಎಂದು ಒಪ್ಪಿಕೊಳ್ಳಲಿ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ಅವರನ್ನು ರೈತ ವಿರೋಧಿ ಎಂದು ಕರೆದ ಪ್ರತಾಪ್ ಸಿಂಹ, ಯಡಿಯೂರಪ್ಪ ಅವರು ಆರಂಭಿಸಿದ್ದ ಕಿಸಾನ್ ಸಮ್ಮಾನ್ ಯೋಜನೆಯನ್ನು ನಿಲ್ಲಿಸಿರುವುದನ್ನು ಟೀಕಿಸಿದರು. ಕಾಂಗ್ರೆಸ್ ಸರ್ಕಾರಕ್ಕೆ ಹೇಳಿಕೊಳ್ಳುವಂತಹ ಯಾವುದೇ ಸಾಧನೆಗಳಿಲ್ಲದ ಕಾರಣ ಯಾವಾಗಲೂ ಕೇಂದ್ರವನ್ನು ಬೈಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ದೇವರಾಜು ಅರಸು ಅವರಿಗಿಂತ ಹೆಚ್ಚು ಕಾಲ ಅಧಿಕಾರ ನಡೆಸುತ್ತಿರುವುದನ್ನು ಬಿಟ್ಟರೆ ಸಿದ್ದರಾಮಯ್ಯ ಅವರ ಸಾಧನೆ ಶೂನ್ಯ ಎಂದ ಅವರು, ಕರ್ನಾಟಕದ ಜನತೆ ಈ ಸರ್ಕಾರ ಯಾವಾಗ ತೊಲಗುತ್ತದೆ ಎಂದು ಕಾಯುತ್ತಿದ್ದಾರೆ ಎಂದು ಹರಿಹಾಯ್ದರು.
ಬಿ.ಕೆ. ಹರಿಪ್ರಸಾದ್ ಅವರ ಶರ್ಟ್ ಹರಿದಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹರಿಪ್ರಸಾದ್ ಸಚಿವ ಸ್ಥಾನಕ್ಕಾಗಿ ಸಿದ್ದರಾಮಯ್ಯ ಅವರನ್ನು ಮೆಚ್ಚಿಸಲು ಇಂತಹ ಗೂಂಡಾ ವರ್ತನೆ ತೋರುತ್ತಿದ್ದಾರೆ. ಇವರು ಶಾಸಕರೋ ಅಥವಾ ಗೂಂಡಾಗಳೋ ಎಂದು ತಿಳಿಯದಂತಾಗಿದೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನದ ಮೇಲೆ ಗೌರವವಿಲ್ಲ ಎಂದು ಆರೋಪಿಸಿದ ಅವರು, ಸಿದ್ದರಾಮಯ್ಯ ಅವರ ಅಧಿಕಾರಾವಧಿ ಮುಗಿದ ನಂತರ ಕಾಂಗ್ರೆಸ್ ಪಕ್ಷಕ್ಕೆ ವೀರೇಂದ್ರ ಪಾಟೀಲ್ ಕಾಲದಲ್ಲಿ ಆದಂತಹ ಸ್ಥಿತಿಯೇ ಮರುಕಳಿಸಲಿದೆ ಎಂದು ಭವಿಷ್ಯ ನುಡಿದರು.
