ಬೆಂಗಳೂರು : ವಿಧಾನಸೌಧದ ಸಚಿವ ಸಂಪುಟ ಸಭಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಅಂತ್ಯವಾಗಿದೆ. 35 ವಿಷಯಗಳನ್ನು ಕ್ಯಾಬಿನೆಟ್ ನಲ್ಲಿ ಚರ್ಚಿಸಲಾಗಿದೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಎಚ್.ಕೆ ಪಾಟೀಲ್, ಹಿಂದೂ ಮ್ಯಾರೇಜ್ ಆ್ಯಕ್ಟ್ ಕಾಯ್ದೆ ತಿದ್ದುಪಡಿಗೆ ಸಚಿವ ಸಂಪುಟ ಅನುಮೋದಿಸಿದೆ. ನೋಂದಣಿ ವಿವಾಹ ಸರಳೀಕರಣಕ್ಕೆ ರಾಜ್ಯ ಸರ್ಕಾರದ ಸಮ್ಮತಿ ನೀಡಿದ್ದು, ಹಿಂದೂ ವಿವಾಹ ನೊಂದಣಿ ಕಾಯ್ದೆ 2024ಕ್ಕೆ ಒಪ್ಪಿಗೆ ಸೂಚಿಸಿದೆ. ಕಚೇರಿಗಳಲ್ಲಿ ಮೊದಲು ವಿವಾಹ ನೊಂದಣಿ ಆಗುತ್ತಿದ್ದವು. ಈಗ ಆನ್ಲೈನ್ ಮೂಲಕ ನೊಂದಣಿಗೆ ಅವಕಾಶವಿದೆ. ಗ್ರಾಮ 1, ಕಾವೇರಿ 2, ಬಾಪೂಜಿ ಸೇವಾಕೇಂದ್ರಗಳಲ್ಲಿ ನೊಂದಣಿ ಮಾಡಬಹುದು. ಇನ್ಮೇಲೆ ಸಬ್ ರಿಜಿಸ್ಟರ್ ಕಚೇರಿಗೆ ಅಲೆಯುವಂತಿಲ್ಲ ಎಂದು ಹೇಳಿದ್ದಾರೆ.