ಮೈಸೂರು: ಬಿಜೆಪಿ ಜತೆ ಲೋಕಸಭಾ ಚುನಾವಣಾ ಹಿತದೃಷ್ಟಿಯಿಂದ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಅಷ್ಟೆ. ನಮ್ಮ ತತ್ವ ಸಿದ್ದಾಂತವೇ ಬೇರೆ, ಬಿಜೆಪಿ ತತ್ವ ಸಿದ್ದಾಂತವೇ ಬೇರೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಸ್ಪಷ್ಟನೆ ಕೊಟ್ಟಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಜೆಡಿಎಸ್ ಜಯಪ್ರಕಾಶ್ ನಾರಾಯಣ್ ಕಟ್ಟಿದ ಪಕ್ಷ. ಪಕ್ಷ ಉಳಿಸಿ ಬೆಳೆಸಿದ ಎಚ್.ಡಿ. ದೇವೇಗೌಡರ ಹಾದಿಯಲ್ಲಿ ನಾವು ಸಾಗುತ್ತೇವೆ. ನಮ್ಮ ತತ್ವ ಸಿದ್ಧಾಂತದಲ್ಲಿ ಒಂದಿಂಚು ಕೂಡ ಬದಲಾಗಲ್ಲ. ಬಿಜೆಪಿಯವರದು ಅವರಿಗೆ ನಮ್ಮದು ನಮಗೆ. ಕೇವಲ ಸೀಟು ಹಂಚಿಕೆ ದೃಷ್ಟಿಯಿಂದ ಮಾತ್ರ ನಾವು ಒಂದಾಗಿದ್ದೇವೆ. ಎಚ್.ಡಿ.ಕುಮಾರಸ್ವಾಮಿ ಕೇಸರಿ ಟವೆಲ್ ಹಾಕಿದ ವಿಚಾರ. ಅದು ಬಿಜೆಪಿಯವರ ಟವಲ್ ಅಲ್ಲ. ಅದು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದಾಗ ಒಬ್ಬ ಹುಡುಗ ಹಾಕಿದ ಟವೆಲ್. ಅದನ್ನೇ ಕಾಂಗ್ರೆಸ್ ನವರು ದೊಡ್ಡದು ಮಾಡಿದ್ದಾರೆ ಅಷ್ಟೆ ಎಂದು ಹೇಳಿದರು.