ಬೆಂಗಳೂರು : ರಾಜ್ಯದಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿದ್ದ ಹೆಚ್ಚು ಆದಾಯವಿರುವ ದೇಗುಲಗಳಿಗೆ ತೆರಿಗೆ ವಿಧಿಸುವ ಹಿಂದೂ ಧಾರ್ಮಿಕ ದತ್ತಿ ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆಯನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಸಹಿ ಹಾಕದೇ ವಾಪಸ್ ಕಳುಹಿಸಿದ್ದಾರೆ. ಇದರಿಂದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಖಭಂಗವಾದಂತಾಗಿದೆ. ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಧರ್ಮದಾಯ ದತ್ತಿ ಇಲಾಖೆ ವ್ಯಾಪ್ತಿಯ ಎ ಮತ್ತು ಬಿ ಶ್ರೇಣಿಯ ದೇಗುಲಗಳ ಆದಾಯದ ಹಣವನ್ನು ಸಿ ಶ್ರೇಣಿಯ ದೇವಾಲಯಗಳ ಅಭಿವೃದ್ಧಿಗೆ ಬಳಸುವುದು ಮತ್ತು ಶ್ರೀಮಂತ ದೇಗುಲಗಳಿಗೆ ತೆರಿಗೆ ವಿಧಿಸುವುದಕ್ಕೆ ಸಂಬಂಧಿಸಿದ ಮಸೂದೆ ಇದಾಗಿದೆ. ಇದನ್ನು ಎರಡೆರಡು ಬಾರಿ ವಿಧಾನಸಭೆಯಲ್ಲಿ ಮಂಡನೆ ಮಾಡಿ ಕಾಂಗ್ರೆಸ್ ಸರ್ಕಾರ ಅನುಮೋದನೆ ಪಡೆದಿತ್ತು. ಮಸೂದೆಯನ್ನು ವಾಪಸ್ ಕಳುಹಿಸಿರುವ ರಾಜ್ಯಪಾಲರು ಕೆಲವೊಂದು ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.