ಚಿಕ್ಕಮಗಳೂರು : ಜಿಲ್ಲೆಯಲ್ಲಿ ಇತ್ತೀಚೆಗೆ ದಾಂಧಲೆ ಎಬ್ಬಿಸಿ ಆತಂಕ ಸೃಷ್ಟಿ ಮಾಡಿದ್ದ ಕಾಡಾನೆ ಬೀಟಮ್ಮ ಗ್ಯಾಂಗ್ ದಿನಕ್ಕೊಂದು ಗ್ರಾಮದಲ್ಲಿ ಕಾಣಿಸಿಕೊಂಡು ಭಯದ ವಾತಾವರಣ ಸೃಷ್ಟಿ ಮಾಡುತ್ತಿದೆ. ಮೂಡಿಗೆರೆ ತಾಲೂಕಿನಲ್ಲಿ ಬೀಡುಬಿಟ್ಟಿರುವ ಈ ಗ್ಯಾಂಗ್ ನ ದಾಂಧಲೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶಗೊಂಡಿದ್ದು, ಸಾರ್ವಜನಿಕರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹಾಸನ, ಚಿಕ್ಕಮಗಳೂರು ಗಡಿ ಭಾಗದಲ್ಲಿ ಬೀಡುಬಿಟ್ಟಿರುವ ಬೀಟಮ್ಮ ತನ್ನ 20ಕ್ಕೂ ಹೆಚ್ಚು ಕಾಡಾನೆಗಳೊಂದಿಗೆ ದಾಂಧಲೆ ನಡೆಸುತ್ತಿದ್ದಾಳೆ. ಕಳೆದ ನಾಲ್ಕು ದಿನಗಳಲ್ಲಿ ಮೂಡಿಗೆರೆ ತಾಲೂಕಿನ ಐದು ಗ್ರಾಮಗಳಿಗೆ ಈ ಗ್ಯಾಂಗ್ ಲಗ್ಗೆ ಇಟ್ಟಿದ್ದು, ಲಕ್ಷಾಂತರ ಮೌಲ್ಯದ ಕಾಫಿ, ಮೆಣಸು, ಬಾಳೆ ಬೆಳೆ ನಾಶಗೊಂಡಿದೆ.