ಮೈಸೂರು: ಬೈಕ್ ಮತ್ತು ಕ್ಯಾಂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ದಂಪತಿ ಪ್ರಾಣ ಕಳೆದುಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ. ದಂಪತಿ ಬೈಕ್ ನಲ್ಲಿ ಸಾಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಹುಣಸೂರು ಕನಕ ಭವನ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟವರನ್ನು ಮಂಜುನಾಥ ಬಡಾವಣೆಯ ನಿವಾಸಿ ರಾಜು (64) ಮತ್ತು ಅವರ ಪತ್ನಿ ಸುನಂದಾ (55) ಎಂದು ಗುರುತಿಸಲಾಗಿದೆ. ಬೈಕ್ ನಲ್ಲಿ ಸಾಗುತ್ತಿದ್ದಾಗ ಹುಣಸೂರು ಕಡೆಯಿಂದ ವೇಗವಾಗಿ ಬಂದ ಕ್ಯಾಂಟರ್ ಗೂಡ್ಸ್ ವಾಹನ ಹಾಗೂ ಬೈಕ್ ಗೆ ಬಡಿದಿದೆ. ಅಪಘಾತ ನಡೆಸಿ ವಾಹನ ನಿಲ್ಲಿಸದೆಯೇ ಗೂಡ್ಸ್ ಚಾಲಕ ಪರಾರಿಯಾಗಿದ್ದಾನೆ. ಬಳಿಕ ಸಾರ್ವಜನಿಕರೇ ಬೆನ್ನಟ್ಟಿ ವಾಹನವನ್ನು ತಡೆದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.