ಮೈಸೂರು : ಲೋಕಸಭೆ ಚುನಾವಣೆ ಇನ್ನೇನು ಕೆಲವೆ ತಿಂಗಳು ಬಾಕಿಯಿರುವ ಹಿನ್ನೆಲೆ ಮೈಲ್ಯಾಕ್ನಿಂದ 26 ಲಕ್ಷ ಅಳಿಸಲಾಗದ ಶಾಯಿ ಪೂರೈಕೆ ಮಾಡಲಾಗುತ್ತಿದೆ. ದೇಶದಲ್ಲಿ ಯಾವುದೆ ಸಾರ್ವತ್ರಿಕ ಚುನಾವಣೆ ನಡೆದರೂ ಕೈ ಬೆರಳಿಗೆ ಹಚ್ಚುವ ಶಾಯಿ ಪೂರೈಕೆಯಾಗುವುದು ಮೈಸೂರಿನಿಂದ. ಹೀಗಾಗಿ ಅಳಿಸಲಾಗದ ಈ ಶಾಯಿಯನ್ನು ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ತಯಾರಿಸುತ್ತದೆ. 10 ಎಂಎಲ್ ಪ್ರಮಾಣದ 26.55 ಲಕ್ಷ ಶಾಯಿ ಬಾಟಲುಗಳನ್ನು ಪೂರೈಸುವಂತೆ ಚುನಾವಣಾ ಆಯೋಗವು ಮೈಸೂರು ಮೈಲ್ಯಾಕ್ ಗೆ ತಿಳಿಸಿದೆ. ಮಾರ್ಚ್ 15ರ ಓಳಗಾಗಿ ದೇಶದ ಎಲ್ಲ ರಾಜ್ಯಗಳ ಚುನಾವಣಾ ಆಯುಕ್ತರ ಕಚೇರಿಗಳ ಬೇಡಿಕೆಗೆ ಅನುಗುಣವಾಗಿ ಅಳಿಸಲಾಗದ ಶಾಯಿ ಪೂರೈಕೆ ಮಾಡಲಾಗುತ್ತದೆ. 10 ಎಂಎಲ್ನ ಒಂದು ಬಾಟಲಿಯಿಂದ 700 ಮತದಾರರ ಬೆರಳಿಗೆ ಶಾಯಿ ಗುರುತು ಹಾಕಬಹುದು.