ಮಂಡ್ಯ, ನವೆಂಬರ್ 24, 2025 :ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಅಧಿಕಾರ ಹಂಚಿಕೆ ಫೈಟ್ ವಿಚಾರವು ಇದೀಗ ವಿಡಂಬನೆಯ ರೂಪವನ್ನು ಪಡೆದುಕೊಂಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪರವಾಗಿ ಬಿಜೆಪಿ ಕಾರ್ಯಕರ್ತರು ಮಂಡ್ಯದಲ್ಲಿ ‘ಗಿಳಿ ಶಾಸ್ತ್ರ’ ಕೇಳುವ ಮೂಲಕ ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿನ ಅಧಿಕಾರ ಹಂಚಿಕೆ ವಿವಾದದ ಕುರಿತು ಮಾತನಾಡಿದ್ದ ಡಿ.ಕೆ. ಶಿವಕುಮಾರ್ ಅವರು, ವಿರೋಧ ಪಕ್ಷದವರು ಬೇಕಿದ್ದರೆ ಗಿಳಿ ಶಾಸ್ತ್ರ ಕೇಳಲಿ ಎಂದು ಹೇಳಿಕೆ ನೀಡಿದ್ದರು.ಇದಕ್ಕೆ ಪ್ರತ್ಯುತ್ತರ ನೀಡಿದ ಬಿಜೆಪಿ ಕಾರ್ಯಕರ್ತರು, ಮಂಡ್ಯದಲ್ಲಿ ಬೀದಿ ಶಾಸ್ತ್ರ ಹೇಳುವವರಿಂದ ಗಿಳಿ ಶಾಸ್ತ್ರ ಕೇಳಿದರು. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರಾ? ಇಲ್ವಾ? ಎಂದು ಪ್ರಶ್ನಿಸಿ ಗಿಳಿಗೆ ಕಾರ್ಡ್ ತೆಗೆಯಲು ಹೇಳಲಾಯಿತು.ಈ ವೇಳೆ ಗಿಳಿಯು ‘ಚಂಬು’ ಇರುವ ಕಾರ್ಡ್ ಅನ್ನು ತೆಗೆದಿದೆ.ಇದನ್ನು ಕಂಡ ಬಿಜೆಪಿ ಕಾರ್ಯಕರ್ತರು, “ಡಿ.ಕೆ. ಶಿವಕುಮಾರ್ ಸಿಎಂ ಆಗಲ್ಲ, ಅವರ ಕೈಗೆ ಚಂಬು ಸಿಗಲಿದೆ” ಎಂದು ವ್ಯಂಗ್ಯವಾಡಿದರು.
ಬಳಿಕ, “ಸಿದ್ದರಾಮಯ್ಯ ಅವರು ಸಿಎಂ ಆಗಿ ಮುಂದುವರೆದರೆ ಜನರಿಗೆ ಒಳ್ಳೆಯದಾಗುತ್ತಾ?” ಎಂದು ಎರಡನೇ ಪ್ರಶ್ನೆಯನ್ನು ಗಿಳಿಗೆ ಕೇಳಲಾಯಿತು.ಈ ಬಾರಿ ಗಿಳಿಯು ‘ಹೂ’ ಇರುವ ಕಾರ್ಡ್ ಅನ್ನು ಎತ್ತಿದೆ.ಇದಕ್ಕೆ ಬಿಜೆಪಿಗರು, “ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆದರೆ ಜನರ ಕಿವಿಗೆ ಹೂ ಇಟ್ಟಂತೆ ಆಗುತ್ತದೆ” ಎಂದು ವಿಡಂಬನೆ ಮಾಡಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
