ನಂಜನಗೂಡು, ಮಾರ್ಚ್ 5, 2026 : ಮಾ.30 ರಂದು ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ಯ ಗೌತಮ ಪಂಚ ಮಹಾ ರಥೋತ್ಸವ ಹಿನ್ನೆಲೆಯಲ್ಲಿ ಇಂದು ಗುರುವಾರ ದೇವಾಲಯದ ಆವರಣದಲ್ಲಿ ರಥ ಚಲನ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಮತ್ತು ದೇವಾಲಯದ ಪ್ರಧಾನ ಆಗಮಿಕ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು.
ರಥ ಚಲನ ಮಹೋತ್ಸವದಲ್ಲಿ 5 ರಥಗಳಿಗೆ ಪೂಜೆ ಸಲ್ಲಿಸಿ ರಥ ಕಟ್ಟಲು ಚಾಲನೆ ದೊರೆಯಿತು. ಶ್ರೀ ನಂಜುಂಡೇಶ್ವರ ಸ್ವಾಮಿಗೆ ಮತ್ತು ಪಾರ್ವತಿ ಅಮ್ಮನವರಿಗೆ ಕ್ಷೀರಾಭಿಷೇಕ ಫಲಪಂಚಾಮೃತ ಅಭಿಷೇಕ, ನಿತ್ಯೋತ್ಸವ ಮತ್ತು ಮೂಲದೇವರ ಪೂಜೆ ನೆರವೇರಿಸಲಾಯಿತು.
ದೇವಾಲಯದ ಸುತ್ತಲೂ ಪ್ರದಕ್ಷಣೆ ಹಾಕಿ, ಗಣಪತಿ ಪೂಜೆ ಹಾಗೂ ನವಗ್ರಹ ಪೂಜೆಯನ್ನು ಸಲ್ಲಿಸಿ ಪಂಚಾಂಗ ರಥದ ಪಟ್ಟಿಗೆ ನವಧಾನ್ಯ ಪೂಜೆ ನೆರವೇರಿಸಲಾಯಿತು. ನಂಜನಗೂಡು ದೊಡ್ಡ ಜಾತ್ರಾ ಮಹೋತ್ಸವದಲ್ಲಿ ಮೊದಲಿಗೆ ಶ್ರೀ ನಂಜುಂಡೇಶ್ವರ ಸ್ವಾಮಿ ರಥೋತ್ಸವ, ಪಾರ್ವತಿ ಅಮ್ಮನವರ ರಥೋತ್ಸವ, ಗಣಪತಿ, ಚಂಡಿಕೇಶ್ವರ ಮತ್ತು ಸುಬ್ರಮಣ್ಯ ರಥೋತ್ಸವಗಳನ್ನು ಮಾಡಲಾಗುತ್ತದೆ. ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ರಥ ಕಟ್ಟುವ ಕಾರ್ಯ ನಡೆಯಲಿದೆ. ಇನ್ನು 25 ದಿನಗಳ ಒಳಗಾಗಿ ಐದು ರಥಗಳನ್ನು ಸಿದ್ಧಪಡಿಸಲು ಮುಂದಾಗಿದ್ದಾರೆ.
