ಮೈಸೂರು, ಜನವರಿ 30, 2026: ಮಾದಕ ವಸ್ತು ಮಾರಾಟ ಜಾಲದಲ್ಲಿ ಭಾಗಿಯಾಗಿರುವ ಶಂಕೆಯ ಹಿನ್ನೆಲೆಯಲ್ಲಿ ಮೈಸೂರಿನ ಆಲನಹಳ್ಳಿ ನಿವಾಸಿಯಾಗಿರುವ ಉದ್ಯಮಿ ಗಣಪತ್ ಲಾಲ್ ಎಂಬುವವರನ್ನು ಎನ್.ಸಿ.ಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಅಧಿಕಾರಿಗಳು ವಶಕ್ಕೆ ಪಡೆದು ರಾಜಸ್ಥಾನಕ್ಕೆ ಕರೆದೊಯ್ದಿದ್ದಾರೆ. ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ‘ಟುಕ್ ಟುಕ್ ಹೌಸ್ ಹೋಲ್ಡ್ ಕೆಮಿಕಲ್ಸ್ ಪ್ರೊಡಕ್ಷನ್ ಸಲ್ಯೂಷನ್ ಮ್ಯಾನಿಫ್ಯಾಕ್ಚರಿಂಗ್’ ಘಟಕದ ಮಾಲೀಕನಾಗಿರುವ ಗಣಪತ್ ಲಾಲ್, ಈ ಹಿಂದೆ ರಾಜಸ್ಥಾನದಲ್ಲಿ ಬಂಧಿತನಾಗಿದ್ದ ಮಾದಕ ದ್ರವ್ಯ ಆರೋಪಿ ಮನೋಹರ್ ಬಿಷ್ಣೋಯಿಯ ನಿಕಟ ಸಂಬಂಧಿಯಾಗಿದ್ದಾನೆ.

ರಾಜಸ್ಥಾನ ಪೊಲೀಸರು ಮತ್ತು ಎನ್.ಸಿ.ಬಿ ಅಧಿಕಾರಿಗಳು ಜಂಟಿಯಾಗಿ ನಡೆಸಿದ ಈ ಕಾರ್ಯಾಚರಣೆಯಲ್ಲಿ, ಬಂಧಿತ ಮನೋಹರ್ ಬಿಷ್ಣೋಯಿ ಜೊತೆ ಗಣಪತ್ ಲಾಲ್ ನಿರಂತರ ಸಂಪರ್ಕದಲ್ಲಿದ್ದ ವಿಚಾರ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಸ್ಥಳೀಯ ನ್ಯಾಯಾಲಯದ ಅನುಮತಿ ಪಡೆದು ಟ್ರಾವೆಲ್ ವಾರೆಂಟ್ ಮೂಲಕ ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ರಾಜಸ್ಥಾನಕ್ಕೆ ಕರೆದೊಯ್ದಿದ್ದಾರೆ. ಮೈಸೂರಿನ ಕೆಮಿಕಲ್ ಮ್ಯಾನಿಫ್ಯಾಕ್ಚರಿಂಗ್ ಘಟಕದ ಮರೆಯಲ್ಲಿ ಮಾದಕ ವಸ್ತುಗಳ ವಹಿವಾಟು ನಡೆಯುತ್ತಿತ್ತೇ ಎಂಬ ಬಗ್ಗೆ ಎನ್.ಸಿ.ಬಿ ತೀವ್ರ ತನಿಖೆ ಕೈಗೊಂಡಿದೆ.
