ಮೈಸೂರು, ಜುಲೈ.23,2026: ರಾಜ್ಯ ಸರ್ಕಾರ ಹೊರಡಿಸಿರುವ ಅಧಿಕೃತ ಆದೇಶವನ್ನು ಮೈಸೂರು ಪೊಲೀಸ್ ಇಲಾಖೆ ಗಾಳಿಗೆ ತೂರಿದ್ದು, ನಗರದ ಹೋಟೆಲ್ ಉದ್ಯಮಿಗಳು ಹಾಗೂ ಪ್ರವಾಸಿಗರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾತ್ರಿ 1 ಗಂಟೆಯವರೆಗೆ ಹೋಟೆಲ್ ಉದ್ಯಮ ನಡೆಸಲು ಸರ್ಕಾರ ಅವಕಾಶ ನೀಡಿದ್ದರೂ, ಮೈಸೂರು ಪೊಲೀಸರು ಮಾತ್ರ ರಾತ್ರಿ 10 ಗಂಟೆಗೇ ಬಾಗಿಲು ಮುಚ್ಚಿಸುವ ಮೂಲಕ ಹಠಮಾರಿತನ ಪ್ರದರ್ಶಿಸುತ್ತಿದ್ದಾರೆ.
9:30ರಿಂದಲೇ ಕಸ್ಟಮರ್ ಕಳಿಸುವಂತೆ ಒತ್ತಡ!
ಕಳೆದ 2024 ರಲ್ಲೇ ರಾಜ್ಯ ಸರ್ಕಾರವು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮಧ್ಯರಾತ್ರಿ 1 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸಲು ಅನುಮತಿ ನೀಡಿ ಆದೇಶ ಹೊರಡಿಸಿದೆ. ಆದರೆ, ಈ ನಿಯಮ ಕೇವಲ ರಾಜಧಾನಿ ಬೆಂಗಳೂರಿಗೆ ಮಾತ್ರ ಸೀಮಿತವೇ ಎನ್ನುವ ಪ್ರಶ್ನೆ ಮೂಡಿದೆ.
ಮೈಸೂರಿನಲ್ಲಿ ರಾತ್ರಿ 9:30 ಆಗುತ್ತಿದ್ದಂತೆಯೇ ಗಸ್ತು ತಿರುಗುವ ಪೊಲೀಸ್ ಸಿಬ್ಬಂದಿ, ಹೋಟೆಲ್ ಬಂದ್ ಮಾಡುವಂತೆ ಉದ್ಯಮಿಗಳ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ. ಪರಿಣಾಮವಾಗಿ, ರಾತ್ರಿ 10 ಗಂಟೆಯ ವೇಳೆಗೆ ಸಾಂಸ್ಕೃತಿಕ ನಗರಿಗೆ ಆಗಮಿಸುವ ದೂರದ ಊರುಗಳ ಪ್ರವಾಸಿಗರು ಮತ್ತು ಪ್ರಯಾಣಿಕರು ಊಟ-ತಿಂಡಿ ಸಿಗದೆ ಬೀದಿಯಲ್ಲಿ ಪರದಾಡುವಂತಾಗಿದೆ.
ಹಿರಿಯ ಅಧಿಕಾರಿಗಳ ಸಬೂಬು!
ಈ ಕುರಿತು ಮೈಸೂರು ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳು ಪ್ರಶ್ನಿಸಿದರೆ, ಹಿರಿಯ ಪೊಲೀಸ್ ಅಧಿಕಾರಿಗಳು ಜಾರಿಕೊಳ್ಳುವ ಉತ್ತರ ನೀಡುತ್ತಿದ್ದಾರೆ. “ಈ ಬಗ್ಗೆ ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ, ಅವರಿಂದ ಅನುಮತಿ ಸಿಕ್ಕ ನಂತರವೇ ನಿಮಗೆ ರಾತ್ರಿ 1 ಗಂಟೆಯವರೆಗೆ ಅವಕಾಶ ನೀಡಲಾಗುವುದು” ಎಂದು ಸಬೂಬು ಹೇಳುತ್ತಾ ಸರ್ಕಾರದ ಆದೇಶ ಅನುಷ್ಠಾನಕ್ಕೆ ತರಲು ಮೀನಾಮೇಷ ಎಣಿಸುತ್ತಿದ್ದಾರೆ.
ಸಾಂಸ್ಕೃತಿಕ ಹಾಗೂ ಪ್ರವಾಸಿ ನಗರಿಯಾಗಿರುವ ಮೈಸೂರಿನಲ್ಲಿ ಹೋಟೆಲ್ ಉದ್ಯಮಕ್ಕೆ ಪೊಲೀಸರು ಅಡ್ಡಿಪಡಿಸುತ್ತಿರುವುದಕ್ಕೆ ಹೋಟೆಲ್ ಮಾಲೀಕರ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತಕ್ಷಣವೇ ಸರ್ಕಾರದ ಆದೇಶವನ್ನು ಯಥಾವತ್ತಾಗಿ ಜಾರಿಗೆ ತರಬೇಕೆಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಆಗ್ರಹಿಸಿದ್ದರು.
