ನಂಜನಗೂಡು, ಫೆಬ್ರವರಿ 7, 2026: ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೋಣನೂರು ಮತ್ತು ಚುಂಚನಹಳ್ಳಿ ಕಿರು ಅರಣ್ಯ ಪ್ರದೇಶದಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿದ್ದು, ಅರಣ್ಯದ ಒಂದಷ್ಟು ಭಾಗ ಬೆಂಕಿಗಾಹುತಿಯಾಗಿದೆ.

ಕೃಷ್ಣರಾಜಪುರ ಗ್ರಾಮದ ಹೊರವಲಯದಲ್ಲಿರುವ ಜಮೀನೊಂದರಿಂದ ಬೆಂಕಿ ಮೊದಲು ಕಾಣಿಸಿಕೊಂಡಿದ್ದು, ನಂತರ ಸುಳಿಗಾಳಿಯ ಹೊಡೆತಕ್ಕೆ ಸಿಲುಕಿ ಮೇವಿನ ಪ್ರದೇಶಕ್ಕೂ ವೇಗವಾಗಿ ವ್ಯಾಪಿಸಿದೆ.
ಈ ಕಿರು ಅರಣ್ಯ ಪ್ರದೇಶಕ್ಕೆ ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯದಾದ್ಯಂತ ಹರಡಿದ್ದ ಬೆಂಕಿಯನ್ನು ನಂದಿಸಲು ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದು, ಹೆಚ್ಚಿನ ಹಾನಿಯಾಗದಂತೆ ತಡೆದಿದ್ದಾರೆ.
