ಮೈಸೂರು, ಡಿಸೆಂಬರ್ 1, 2025 : ಶೈಕ್ಷಣಿಕ ಪ್ರವಾಸಕ್ಕಾಗಿ ಮೈಸೂರಿನಿಂದ ತೆರಳಿದ್ದ ಶಾಲಾ ಬಸ್ ನಿನ್ನೆ ಸಂಜೆ ಕಾರವಾರ ಜಿಲ್ಲೆಯ ಹೊನ್ನಾವರ ಬಳಿ ಪಲ್ಟಿಯಾದ ಘಟನೆ ನಡೆದಿದ್ದು, 10ನೇ ತರಗತಿಯ ವಿದ್ಯಾರ್ಥಿ ಪವನ್ ಸಾವನ್ನಪ್ಪಿದ್ದಾನೆ. ಈ ದುರಂತ ಸುದ್ದಿ ಮೈಸೂರಿನ ಪೋಷಕರ ವಲಯದಲ್ಲಿ ಆತಂಕ ಮತ್ತು ಕಣ್ಣೀರಿನ ವಾತಾವರಣ ಸೃಷ್ಟಿಸಿದೆ.
ಮೈಸೂರಿನ ತರಳಬಾಳು ಶಾಲೆಯಿಂದ ಶನಿವಾರ ರಾತ್ರಿ ಪ್ರವಾಸಕ್ಕೆ ತೆರಳಿದ್ದ 10ನೇ ತರಗತಿಯ ವಿದ್ಯಾರ್ಥಿಗಳು ಬುಧವಾರ ಬೆಳಿಗ್ಗೆ ಮೈಸೂರಿಗೆ ಹಿಂದಿರುಗಬೇಕಿತ್ತು. ಆದರೆ, ಪ್ರವಾಸ ಮುಗಿಸುವ ಮುನ್ನವೇ ಈ ಅಪಘಾತ ಸಂಭವಿಸಿದೆ. ಸದ್ಯ, ತಮ್ಮ ಮಕ್ಕಳನ್ನು ನೋಡುವ ತವಕದಲ್ಲಿರುವ ಪೋಷಕರು ಶಾಲೆಯ ಮುಂಭಾಗದಲ್ಲಿ ಜಮಾಯಿಸಿದ್ದು, ಆತಂಕ ಮತ್ತು ದುಃಖದಿಂದ ಕಣ್ಣೀರು ಹಾಕುತ್ತಿದ್ದಾರೆ.ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಲೆಯ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಶ್ರೀವತ್ಸ ಅವರು, ವಿದ್ಯಾರ್ಥಿಗಳ ಪೋಷಕರನ್ನು ಸಮಾಧಾನಪಡಿಸಿದರು. ಅಲ್ಲದೆ, ಶಾಲಾ ಆಡಳಿತ ಮಂಡಳಿ ಮತ್ತು ಪೋಷಕರ ಜೊತೆ ಸಭೆ ನಡೆಸಿದರು. ಜಿಲ್ಲಾಧಿಕಾರಿ ಮುಖಾಂತರ ಕಾರವಾರ ಡಿಸಿ ಜೊತೆ ಮಾತನಾಡಿ, ಉಳಿದ ಮಕ್ಕಳನ್ನು ಸುರಕ್ಷಿತವಾಗಿ ಮೈಸೂರಿಗೆ ಕರೆತರಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಶ್ರೀವತ್ಸ ತಿಳಿಸಿದ್ದಾರೆ.
ಅಪಘಾತದ ವಿವರಗಳು
ಮೈಸೂರಿನ ತರಳಬಾಳು ಶಾಲಾ ಆಡಳಿತ ಮಂಡಳಿಯು ಪ್ರವಾಸಕ್ಕಾಗಿ ಖಾಸಗಿ ಬಸ್ ವ್ಯವಸ್ಥೆ ಮಾಡಿತ್ತು. ಬಸ್‌ನಲ್ಲಿ ಒಟ್ಟು 43 ಮಕ್ಕಳು ಹಾಗೂ ಶಿಕ್ಷಕರು ಮತ್ತು ಸಿಬ್ಬಂದಿ ಸೇರಿದಂತೆ 48 ಮಂದಿ ಪ್ರಯಾಣಿಸುತ್ತಿದ್ದರು. ನೆನ್ನೆ (ಭಾನುವಾರ) ಸಂಜೆ ಕಾರವಾರ ಜಿಲ್ಲೆಯ ಹೊನ್ನಾವರ ಬಳಿ ಬಸ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ದುರಂತದಲ್ಲಿ ವಿದ್ಯಾರ್ಥಿ ಪವನ್ ಸಾವನ್ನಪ್ಪಿದ್ದು, ಇಬ್ಬರು ವಿದ್ಯಾರ್ಥಿಗಳಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ.
ಇಂದು ರಾತ್ರಿ ಮೈಸೂರಿಗೆ ಮಕ್ಕಳ ಆಗಮನ
ಬಸ್ ಅಪಘಾತದ ಹಿನ್ನೆಲೆಯಲ್ಲಿ, ಕಾರವಾರ ಜಿಲ್ಲಾಡಳಿತವು ಉಳಿದ ಮಕ್ಕಳು ಮೈಸೂರಿಗೆ ತಲುಪಲು ಪರ್ಯಾಯ ಬಸ್ ವ್ಯವಸ್ಥೆ ಮಾಡಿದೆ.ಉಳಿದ ಶಾಲಾ ಮಕ್ಕಳು ಇಂದು (ಸೋಮವಾರ) ರಾತ್ರಿ 7 ಗಂಟೆ ಸುಮಾರಿಗೆ ಮೈಸೂರಿಗೆ ಆಗಮಿಸುವ ಸಾಧ್ಯತೆಯಿದೆ. ಸಾವನ್ನಪ್ಪಿರುವ ವಿದ್ಯಾರ್ಥಿ ಪವನ್ ಅವರ ಮೃತದೇಹವೂ ಸಹ ಇಂದು ಸಂಜೆ ಮೈಸೂರಿಗೆ ಆಗಮಿಸುವ ನಿರೀಕ್ಷೆ ಇದೆ.
