ಮೈಸೂರು, ಡಿಸೆಂಬರ್ 4, 2025 : ರಿಯಲ್ ಎಸ್ಟೇಟ್ ಕ್ಷೇತ್ರದ ಹೊಸ ನಿಯಮಗಳು, ಅನುಸರಣೆ ಕ್ರಮಗಳು ಹಾಗೂ ಪ್ರಾಯೋಗಿಕ ಅಂಶಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಕ್ರೆಡಾಯ್ ಮೈಸೂರು ಘಟಕವು ಡಿಸೆಂಬರ್ 6 ರಂದು ರೇರಾ (RERA) ಜಾಗೃತಿ ಕಾರ್ಯಾಗಾರವನ್ನು ಆಯೋಜಿಸಿದೆ.

ಈ ಕುರಿತು ಕ್ರೆಡಾಯ್ ಮೈಸೂರು ವತಿಯಿಂದ ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಲಾಯಿತು. ಬಡಾವಣೆ ನಿರ್ಮಾಣಗಾರರು, ಡೆವಲಪರ್ ಗಳು ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಡಿಸೆಂಬರ್ 6ರ ಸಂಜೆ 4 ರಿಂದ 6 ಗಂಟೆಯವರೆಗೆ ವಿದ್ಯಾರಣ್ಯಪುರಂ, ವಿಶ್ವೇಶ್ವರನಗರದ ಇಂಡಸ್ಟ್ರಿಯಲ್ ಸಬರ್ಬ್ ನ ಅಕ್ಕಮಹಾದೇವಿ ರಸ್ತೆಯ ಎಂ.ಬಿ.ಸಿ.ಟಿ ಹಾಲ್ ನಲ್ಲಿ ಆಯೋಜಿಸಲಾಗಿದೆ.
ರೇರಾ ಜಾಗೃತಿ ಕಾರ್ಯಾಗಾರಕ್ಕೆ ರೇರಾ ಕರ್ನಾಟಕ ಪ್ರಾಧಿಕಾರದ ಛೇರ್ಮನ್ ರಾಖೇಶ್ ಸಿಂಗ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇವರೊಂದಿಗೆ, ಮೈಸೂರು ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತರೆಡ್ಡಿ, ಜಿಲ್ಲಾ ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಎಸ್. ಉಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಕ್ಷಿತ್, ಕರ್ನಾಟಕ ರೇರಾ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಹಾಗೂ ವಿಷಯ ತಜ್ಞರು ಪಾಲ್ಗೊಳ್ಳಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕ್ರೆಡೈ ಮೈಸೂರು ಘಟಕದ ಅಧ್ಯಕ್ಷ ಹರೀಶ್ ಶೆಣೈ, ಕಾರ್ಯದರ್ಶಿ ನಾಗರಾಜ್ ವಿ ಬೈರಿ, ಜಂಟಿ ಕಾರ್ಯದರ್ಶಿ ಉದಯ್ ಎಸ್ ಕುಮಾರ್, ಜಿಎಸ್ ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಡಿ ಶ್ರೀಹರಿ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.
