ನಂಜನಗೂಡು, ಮಾರ್ಚ್ 2, 2026 : ಹಳೆಯ ದ್ವೇಷದ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೋರ್ವಳ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಂಜನಗೂಡು ತಾಲೂಕಿನ ಪಾಳ್ಯ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ಪೂರ್ಣಿಮಾ ಎಂಬಾಕೆಯೇ ಹಲ್ಲೆಗೊಳಗಾದ ವಿದ್ಯಾರ್ಥಿನಿ. ಈಕೆ ಕನ್ನಡ ಪರೀಕ್ಷೆ ಮುಗಿಸಿ ಮನೆಗೆ ಹಿಂತಿರುಗಿದ್ದ ಸಮಯದಲ್ಲಿ, ಸೋಮಣ್ಣ ಎಂಬಾತ ತನ್ನ ಸಹಚರರೊಂದಿಗೆ ಏಕಾಏಕಿ ಮನೆಗೆ ನುಗ್ಗಿ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. “ನೀನು ಓದಬಾರದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಬಾರದು” ಎಂಬ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ನೊಂದ ಯುವತಿ ಆರೋಪಿಸಿದ್ದಾಳೆ.
ತನ್ನ ಸೋದರ ಮಾವನ ಆಶ್ರಯದಲ್ಲಿ ಬೆಳೆಯುತ್ತಿದ್ದ ಪೂರ್ಣಿಮಾಳ ರಕ್ಷಣೆಗೆ ಬಂದ ಕುಟುಂಬಸ್ಥರ ಮೇಲೂ ಈ ಗುಂಪು ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿದೆ ಎನ್ನಲಾಗಿದೆ. ಸದ್ಯ ಗಾಯಗೊಂಡಿರುವ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಸೋಮಣ್ಣ ಸೇರಿದಂತೆ ಒಟ್ಟು ಏಳು ಜನರ ವಿರುದ್ಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
