ಮೈಸೂರು, ಮಾರ್ಚ್ 5, 2026 : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದಾರೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ನೈರ್ಮಲೀಕರಣ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ (AEE) ಆಸೀಫ್ ಇಕ್ಬಾಲ್ ಹುಸೇನ್ ಅವರಿಗೆ ಸೇರಿದ ಕಚೇರಿ ಹಾಗೂ ನಿವಾಸಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.
ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಮೈಸೂರಿನ ಸರಸ್ವತಿಪುರಂನಲ್ಲಿರುವ ಆಸೀಫ್ ಇಕ್ಬಾಲ್ ಅವರ ಕಚೇರಿ ಹಾಗೂ ಎನ್.ಆರ್. ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿರುವ ಅವರ ನಿವಾಸದ ಮೇಲೆ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಪ್ರಸ್ತುತ ಎರಡೂ ಸ್ಥಳಗಳಲ್ಲಿ ಬೀಡುಬಿಟ್ಟಿರುವ ಲೋಕಾಯುಕ್ತ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಆಸ್ತಿಪಾಸ್ತಿ ಮತ್ತು ಬ್ಯಾಂಕ್ ವಿವರಗಳ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
