ಮೈಸೂರು , ಡಿಸೆಂಬರ್ 3, 2025 : ಮೈಸೂರು ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನಗರದ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಗಾಂಜಾ, ಲಕ್ಷಾಂತರ ರೂಪಾಯಿ ನಗದು ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಮೂರು ಪ್ರತ್ಯೇಕ ಮನೆಗಳ ಮೇಲೆ ಪೊಲೀಸರು ನ್ಯಾಯಾಲಯದ ಸರ್ಚ್ ವಾರೆಂಟ್‌ನೊಂದಿಗೆ ಏಕಕಾಲಕ್ಕೆ ದಾಳಿ ನಡೆಸಿದರು. ಈ ವೇಳೆ ಅಕ್ರಮ ಚಟುವಟಿಕೆಗಳು ಬೆಳಕಿಗೆ ಬಂದಿದ್ದು, ಪೊಲೀಸ್ ಕಾರ್ಯಾಚರಣೆಯಲ್ಲಿ 2 ಕೆ.ಜಿ ಗಾಂಜಾ, 7.30 ಲಕ್ಷ ರೂಪಾಯಿ ನಗದು, 10 ತಲವಾರುಗಳು (Talwar), ಕತ್ತಿ, ಮಚ್ಚುಗಳು ಸೇರಿದಂತೆ ವಿವಿಧ ಮಾರಕಾಸ್ತ್ರಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಇಬ್ಬರ ಬಂಧನ, ಶೋಧ ಕಾರ್ಯ ಮುಂದುವರಿಕೆ
ಅಲ್ಲದೆ ಈ ದಾಳಿಯ ಸಂದರ್ಭದಲ್ಲಿ ಪೊಲೀಸರು ಇಬ್ಬರು ಆರೋಪಿಗಳಾದ ಫಿರ್ದೋಸ್ ಪಾಷಾ ಮತ್ತು ರೋಶನ್ ಬೇಗ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಇನ್ನೂ ಹಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಸೆರೆಗೆ ಮೈಸೂರು ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ. ಈ ಕುರಿತು ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
