ಮೈಸೂರು, ಜುಲೈ 11, 2026 : ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರ ಆಯ್ಕೆ, ಕಂಬಳ ಆಯೋಜನೆ ಹಾಗೂ ಪಾಸ್ ವಿತರಣೆ ಗೊಂದಲಗಳ ಕುರಿತು ಮೈಸೂರಿನಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ದಸರಾ ಉನ್ನತ ಮಟ್ಟದ ಸಭೆಯಲ್ಲಿ ಎಲ್ಲ ಪ್ರಮುಖ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆದಿದೆ ಎಂದ ಅವರು, ಕಳೆದ 25 ವರ್ಷಗಳಿಂದ ಸುತ್ತೂರು ಸಂಸ್ಥಾನಕ್ಕೆ ದಸರಾ ಮಹೋತ್ಸವ ಉದ್ಘಾಟಿಸಲು ಅವಕಾಶ ಸಿಕ್ಕಿಲ್ಲ. ಆದ್ದರಿಂದ, ಈ ಬಾರಿಯಾದರೂ ಸುತ್ತೂರು ಶ್ರೀಗಳಿಗೆ ಉದ್ಘಾಟನೆಯ ಸುವರ್ಣಾವಕಾಶ ಮಾಡಿಕೊಡಬೇಕು ಎಂದು ಸಭೆಯಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದರು. ಉದ್ಘಾಟಕರ ಅಂತಿಮ ಆಯ್ಕೆಯ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಿಟ್ಟಿರುವುದಾಗಿ ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜನೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಯದುವೀರ್ ಒಡೆಯರ್ ಅವರ ಹೇಳಿಕೆಯನ್ನು ಸಂಪೂರ್ಣವಾಗಿ ಬೆಂಬಲಿಸಿದ ಶಾಸಕರು, ದಸರಾದಲ್ಲಿ ಕಂಬಳ ಆಯೋಜನೆ ಬೇಡ ಎನ್ನುವ ಸಂಸದರ ನಿಲುವಿಗೆ ನನ್ನ ಸಹಮತವಿದೆ ಎಂದರು. ಉನ್ನತ ಮಟ್ಟದ ಸಭೆಯಲ್ಲೇ ನಾವು ಕಂಬಳ ಬೇಡ ಎಂದು ಸ್ಪಷ್ಟಪಡಿಸಿದ್ದೇವೆ ಮತ್ತು ಈ ಯೋಜನೆಗೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಕೂಡ ಸಭೆಯ ಗಮನ ಸೆಳೆದಿದ್ದಾರೆ ಎಂದು ಮಾಹಿತಿ ನೀಡಿದರು. ದಸರಾ ಮಹೋತ್ಸವವು ವಾಣಿಜ್ಯೀಕರಣಗೊಳ್ಳುವುದು ಬೇಡ, ಅದು ಎಂದಿನಂತೆ ಸಾಂಪ್ರದಾಯಿಕ ಸಾಂಸ್ಕೃತಿಕ ಹಬ್ಬವಾಗಿಯೇ ನಡೆಯಲಿ ಎನ್ನುವುದು ನಮ್ಮ ಆಶಯವಾಗಿದೆ ಎಂದು ಅವರು ಪ್ರತಿಪಾದಿಸಿದರು.
ದಸರಾ ಪಾಸ್ ಹಾಗೂ ಗೋಲ್ಡ್ ಕಾರ್ಡ್ ಗೊಂದಲಗಳ ಕುರಿತು ಮಾತನಾಡಿದ ಶಾಸಕ ಶ್ರೀವತ್ಸ, ದಸರಾ ಪಾಸ್ ವ್ಯವಸ್ಥೆಯಿಂದಾಗಿ ಪ್ರತಿ ವರ್ಷ ಭಾರೀ ಗೊಂದಲ ಸೃಷ್ಟಿಯಾಗುತ್ತಿದೆ. ಈ ಹಿಂದೆ ಗೋಲ್ಡ್ ಕಾರ್ಡ್ ಪಡೆದು ಒಳಗೆ ಹೋದಾಗ ಅವರ ಆಸನಗಳಲ್ಲಿ ಬೇರೆಯವರು ಕುಳಿತಿರುವಂತಹ ಕಹಿ ಘಟನೆಗಳು ನಡೆದಿವೆ. ಈ ಎಲ್ಲಾ ಗೊಂದಲಗಳಿಗೆ ಮುಕ್ತಿ ಹಾಡಲು ಎಲ್ಲವನ್ನೂ ಪಾರದರ್ಶಕ ಟೆಂಡರ್ ಪ್ರಕ್ರಿಯೆಯ ಮೂಲಕವೇ ವಿತರಿಸಲಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು. ಇನ್ನು ಯುವ ದಸರಾ ಆಯೋಜನೆಯ ಕುರಿತು ಸಭೆಯಲ್ಲಿ ಚರ್ಚೆ ನಡೆದಿದ್ದು, ಯುವಕರಿಗೋಸ್ಕರ ಯುವ ದಸರಾವನ್ನು ಮುಂದುವರಿಸಬೇಕು ಎಂದು ಯತೀಂದ್ರ ಅವರು ಅಭಿಪ್ರಾಯಪಟ್ಟಿದ್ದಾರೆ. ಅಂತಿಮವಾಗಿ, ಸದ್ಯಕ್ಕೆ ಚಾಲ್ತಿಯಲ್ಲಿರುವ ದಸರಾ ಕಾರ್ಯಕ್ರಮಗಳನ್ನು ಯಥಾವತ್ತಾಗಿ ಮುಂದುವರೆಸಿಕೊಂಡು, ಸಾಧ್ಯವಾದರೆ ಮಾತ್ರ ಹೊಸ ಕಾರ್ಯಕ್ರಮಗಳನ್ನು ಸೇರ್ಪಡೆ ಮಾಡೋಣ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಶಾಸಕ ಶ್ರೀವತ್ಸ ವಿವರಿಸಿದರು.
